ADVERTISEMENT

ಶಿಕ್ಷಣ ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸಬೇಕು: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 9:34 IST
Last Updated 5 ಸೆಪ್ಟೆಂಬರ್ 2023, 9:34 IST
<div class="paragraphs"><p>ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,&nbsp;ಶಾಸಕ ರಿಜ್ವಾನ್ ಅರ್ಷದ್,&nbsp; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಎಸ್.ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಇದ್ದರು.</p></div>

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರಿಜ್ವಾನ್ ಅರ್ಷದ್,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಎಸ್.ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಇದ್ದರು.

   

ಬೆಂಗಳೂರು: ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ‌ ಶಿಕ್ಷಣದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಶಿಕ್ಷಕರ ದಿನಾಚರಣೆ’ಯನ್ನು ಉದ್ಘಾಟಿಸಿ, 43 ಮಂದಿ ಪುರಸ್ಕೃತ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ADVERTISEMENT

‘ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು. ಇವರು ಸಮಾಜದ, ದೇಶದ ಭವಿಷ್ಯ ರೂಪಿಸುವ ಕಾಯಕ ಜೀವಿಗಳು’ ಎಂದು ನುಡಿದರು.

‘ಡಿಗ್ರಿ ಪಡೆದು, ಡಾಕ್ಟರೇಟ್ ಪಡೆದರೂ ಅವರಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಯದಿದ್ದರೆ, ತಲೆಯೊಳಗೆ ಮೌಡ್ಯ ತುಂಬಿಕೊಂಡಿದ್ದರೆ ಅವರನ್ನು ಸುಶಿಕ್ಷಿತರು ಎಂದು ಕರೆಯಲು ಸಾಧ್ಯವಿಲ್ಲ. ಡಿಗ್ರಿ ಪಡೆದವರೇ ಹೆಚ್ಚೆಚ್ವು ಜಾತಿವಾದಿಗಳಾದರೆ ಈ ಚಂದಕ್ಕೆ ಶಿಕ್ಷಣ ಏಕೆ ಪಡೆಯಬೇಕು’ ಎಂದು ಪ್ರಶ್ನಿಸಿದರು.

‘ಶೂದ್ರರು ಮತ್ತು ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಹೊರಗೆ ಇಡಲಾಗಿತ್ತು. ನಮ್ಮ ಸಂವಿಧಾನ ಎಲ್ಲರಿಗೂ ಶಿಕ್ಷಣದ ಅವಕಾಶವನ್ನು ಒದಗಿಸಿತು. ಈಗ ಈ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಆದ್ದರಿಂದ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದು 76 ವರ್ಷವಾದರೂ ಶೇ.100 ಸಾಕ್ಷರತೆ ಸಾಧ್ಯವಾಗಿಲ್ಲ. ಶಿಕ್ಷಣದಿಂದ ವಂಚಿತರಾದವರು ಅಸಮಾನತೆಗೆ ಬಲಿಯಾಗುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಬೇಕಾದರೆ ಎಲ್ಲರಿಗೂ ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆತು ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಬೇಕು’ ಎಂದರು.

’ಶಿಕ್ಷಕ ವೃತ್ತಿಗೆ ಬರುವಾಗ ಎಲ್ಲಾ ಶಿಕ್ಷಕರಿಗೂ ಒಂದೇ ರೀತಿಯ ತರಬೇತಿ ಇರುತ್ತದೆ. ಆದರೆ ಬೇರೆ ಬೇರೆ ಜಿಲ್ಲೆಗಳ ಫಲಿತಾಂಶದ ಪ್ರಮಾಣ, ಶೈಕ್ಷಣಿಕ ಗುಣಮಟ್ಟ ಭಿನ್ನವಾಗಿರುವುದು ಏಕೆ ಎನ್ನುವುದನ್ನು ಪ್ರತಿಯೊಬ್ಬ ಶಿಕ್ಷಕರೂ ತಮ್ಮನ್ನು ತಾವು ಕೇಳಿಕಂಡು ದಿನದಿಂದ ದಿನಕ್ಕೆ ಉನ್ನತೀಕರಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ನಮ್ಮ ಸರ್ಕಾರ ಬಂದ ಬಳಿಕ 10 ಸಾವಿರ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿದ್ದೂ ಸೇರಿ ಹಲವು ಕಾರ್ಯಕ್ರಮ ಮಾಡಿದೆವು. ಪರಿಶಿಷ್ಟ ಜಾತಿ, ವರ್ಗದ ಮಕ್ಕಳಿಗೆ ನಾವು ನಮ್ಮ ಸರ್ಕಾರದ ಅವಧಿಯಲ್ಲಿ ಲ್ಯಾಪ್ ಟಾಪ್ ನೀಡುವ ಕಾರ್ಯಕ್ರಮ ಆರಂಭಿಸಿದೆವು. ನಂತರ ಬಂದ ಸರ್ಕಾರ ಇದನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ನಾವು ಅಧಿಕಾರಕ್ಕೆ ಬಂದು ಲ್ಯಾಪ್ ಟಾಪ್ ಕೊಡುವುದನ್ನು ಮುಂದುವರೆಸಿದ್ದೇವೆ’ ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಎಸ್.ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಹಲವು ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.