ಬೆಂಗಳೂರು: ‘ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್ 13 ರಿಂದ ಶಾಲೆ ತೊರೆದು ಪ್ರತಿಭಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ತಿಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಎನ್. ಅನಂತನಾಯ್ಕ್, ಅಧ್ಯಕ್ಷ ಹನುಮಂತ ಎಚ್.ಎಸ್., ‘ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿಯನ್ನು ಕೈಬಿಟ್ಟು, ಸೇವಾ ಹಿರಿತನವನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಈಗ ವರ್ಷದಲ್ಲಿ ಕೇವಲ 10 ತಿಂಗಳು ಮಾತ್ರ ಕೆಲಸವಿದ್ದು, ತಿಂಗಳಿಗೆ ₹12 ಸಾವಿರ ವೇತನ ನೀಡಲಾಗುತ್ತದೆ. ಇದರಿಂದ, ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಗೌರವಧನದ ಮೊತ್ತವನ್ನು ತಿಂಗಳಿಗೆ ₹25 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
‘ನೇಮಕಾತಿ ಸಂದರ್ಭದಲ್ಲಿ 5 ಕೃಪಾಂಕಗಳನ್ನು ನೀಡಬೇಕು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ವರ್ಷದಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಅತಿಥಿ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.