ADVERTISEMENT

ಪಿಪಿಇ ಕಿಟ್‌ ಸಂಸ್ಕರಣೆಗೆ ತಂತ್ರಜ್ಞಾನ

ವೈದ್ಯಕೀಯ ಪ್ಲಾಸ್ಟಿಕ್‌ ತ್ಯಾಜ್ಯಗಳ ಸುಗಮ ವಿಲೇವಾರಿ l ವಿದ್ಯಾರ್ಥಿಗಳ ಆವಿಷ್ಕಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 22:19 IST
Last Updated 10 ಜುಲೈ 2020, 22:19 IST
ಪಿಪಿಇ ಕಿಟ್‌ಗಳ ಮರು ಬಳಕೆ ತಂತ್ರಜ್ಞಾನದ ವಿನ್ಯಾಸ
ಪಿಪಿಇ ಕಿಟ್‌ಗಳ ಮರು ಬಳಕೆ ತಂತ್ರಜ್ಞಾನದ ವಿನ್ಯಾಸ   

ಬೆಂಗಳೂರು: ಕೋವಿಡ್‌ ಚಿಕಿತ್ಸೆಗಾಗಿ ಬಳಸಿದಪಿಪಿಇ ಕಿಟ್‌, ಸಿರಿಂಜ್, ಟ್ಯೂಬ್‌ ಮತ್ತಿತರ ತ್ಯಾಜ್ಯಗಳ ವಿಲೇವಾರಿ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಬೆಂಗಳೂರು ವಿದ್ಯಾರ್ಥಿಗಳುಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ದೇಶದಲ್ಲಿ ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಬಳಸಿದ ಪಿಪಿಇ ಕಿಟ್‌ಗಳ ವಿಲೇವಾರಿ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಈ ಸಮಸ್ಯೆಗೆ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಪರಿಹಾರ ಕಂಡು ಹಿಡಿದಿದ್ದಾರೆ. ಇದು ಚಿಕಿತ್ಸೆಯಲ್ಲಿ ಬಳಸಿದ ಪಿಪಿಇ ಸೇರಿ ಪ್ಲಾಸ್ಟಿಕ್ ಉಪಕರಣಗಳ ತ್ಯಾಜ್ಯ ವಿಲೇವಾರಿಗೆ ಆಶಾಕಿರಣ ಎನಿಸಿದೆ. ಇದಕ್ಕೆ ‘ಪಿಪಿಇ ರಿಸೈಕ್ಲಿಂಗ್‌ ಮೆಷಿನ್‌’ ಎಂದು ಹೆಸರಿಸಲಾಗಿದೆ.

‘ಈ ತಂತ್ರಜ್ಞಾನದ ಮೂಲಕ ಪಿಪಿಇ ಕಿಟ್‌ಗಳು ಸೇರಿ ಬಳಕೆಯಾದ ಎಲ್ಲ ರೀತಿಯ ವೈದ್ಯಕೀಯ‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕರಗಿಸಿ, ಪುಟ್ಟ- ಪುಟ್ಟ ಬಿಲ್ಲೆಗಳನ್ನಾಗಿ ಮಾರ್ಪಡಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಎಲ್ಲ ಬಗೆಯ ವೈರಸ್‌ಗಳೂ ನಾಶವಾಗುತ್ತವೆ. ಈ ಸಾಧನವನ್ನುಆಸ್ಪತ್ರೆಗಳು ಮತ್ತು ಇತರ ಕಡೆಗಳಲ್ಲಿ ಇಟ್ಟುಕೊಂಡು ಸುಲಭವಾಗಿ ನಿರ್ವಹಿಸಬಹುದು’ ಎನ್ನುತ್ತಾರೆ ಯೋಜನೆಯ ಪರಿಕಲ್ಪನೆಯ ರೂವಾರಿ ವಿದ್ಯಾರ್ಥಿ ಆಶಿಕ್‌ ಎಸ್‌.ವಿ.

ADVERTISEMENT

‘ಈ ಸಾಧನದಲ್ಲಿ ವಿವಿಧ ಹಂತಗಳ ಚೇಂಬರ್‌ಗಳಿರುತ್ತವೆ. ಪಿಪಿಇ ಕಿಟ್‌ ಅಥವಾ ಇತರ ಪ್ಲಾಸ್ಟಿಕ್‌ಗಳನ್ನು ಹಾಕಿದಾಗ ಹೀಟಿಂಗ್‌ ಚೇಂಬರ್‌ನಲ್ಲಿ ಎಲ್ಲವನ್ನು ಹಪ್ಪಳದಂತೆ ಒತ್ತುವ ಕ್ರಿಯೆ (ಕಂಪ್ರೆಸ್‌) ನಡೆಯುತ್ತದೆ. ಸುಮಾರು 70 ರಿಂದ 100 ಸೆಂಟಿಗ್ರೇಡ್‌ ಉಷ್ಣಾಂಶದಲ್ಲಿ ಮತ್ತಷ್ಟು ಕುಗ್ಗಿಸಲಾಗುತ್ತದೆ. ಹಪ್ಪಳದಂತೆ ಒತ್ತಿದ ಪ್ಲಾಸ್ಟಿಕ್‌ಗಳನ್ನು ಬಿಲ್ಲೆಗಳಾಗಿ ತುಂಡರಿಸಲಾಗುತ್ತದೆ. ತುಂಡರಿಸಿದ ಪ್ಲಾಸ್ಟಿಕ್‌ ಬಿಲ್ಲೆಗಳು ಕೊನೆಯ ಚೇಂಬರ್‌ನಲ್ಲಿ ಸಂಗ್ರಹವಾಗುತ್ತವೆ. ಅಲ್ಲಿ ಅತಿ ನೇರಳೆ ಕಿರಣಗಳನ್ನು ಹಾಯಿಸಿ ವೈರಸ್‌ಗಳನ್ನು ನಾಶಪಡಿಸಲಾಗುತ್ತದೆ’ ಎನ್ನುತ್ತಾರೆ ಆಶಿಕ್‌.

ಆಶಿಕ್‌, ಪ್ರವೀಣ್ ಮೌನಭಾರ್ಗವ್‌ ಮತ್ತು ಶೀತಲ್‌ ಬಳಕ್ಕುರಾಯ ಅವರು ಪ್ರಾಧ್ಯಾಪಕ ಡಾ.ಬಿ.ಇ.ನವೀನ್‌ ಮಾರ್ಗದರ್ಶನದಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

‘ಆಸಕ್ತ ಉದ್ಯಮ ಅಥವಾ ಸರ್ಕಾರದ ಅಧೀನ ಸಂಸ್ಥೆಗಳು ಬಯಸಿದಲ್ಲಿ ತಂತ್ರಜ್ಞಾನ ವರ್ಗಾವಣೆ ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಆಶಿಕ್.

ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್‌ ಬಿಲ್ಲೆಗಳ ಬಳಕೆ

ಪಿಪಿಇ ಕಿಟ್‌‌ಗಳನ್ನು ಬಿಲ್ಲೆಗಳನ್ನಾಗಿ ಮಾರ್ಪಡಿಸಿದ ಮೇಲೆ ರಸ್ತೆ ನಿರ್ಮಾಣಕ್ಕೆ ಬಳಸಬಹುದು. ಈಗಾಗಲೇ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್‌ ಬಳಸಲಾಗುತ್ತಿದೆ. ಅಂತೆಯೇ, ಈ ಬಿಲ್ಲೆಗಳನ್ನೂ ಬಳಸಬಹುದು. ಈ ಸಾಧನ ಅತಿ ಕಡಿಮೆ ವಿದ್ಯುತ್‌ ಬಳಸುತ್ತದೆ. ಹೆಚ್ಚಿಗೆ ಶಬ್ದ ಮಾಡುವುದಿಲ್ಲ, ಹೊಗೆ ಉಗುಳುವುದಿಲ್ಲ. ಎಲ್ಲೂ ರಾಸಾಯನಿಕಗಳನ್ನು ಬಳಸುವುದಿಲ್ಲ. ಈ ಸಾಧನದ ಅಂದಾಜು ವೆಚ್ಚ ₹10ಸಾವಿರ ಆಗಬಹುದು. ಆಶಿಕ್ ಅವರು ‘ಪ್ರಜಾವಾಣಿ ಯುವ ಸಾಧಕ 2020’ ಪ್ರಶಸ್ತಿ ಪಡೆದಿದ್ದರು. ಇವರ ಸಂಪರ್ಕ ಸಂಖ್ಯೆ 9900270875, ಡಾ.ನವೀನ್‌ 9164945151.

***

ಕೋವಿಡ್‌ಗೆ ಪೂರಕ ಯೋಜನೆ ಅಭಿವೃದ್ಧಿಪಡಿಸುವಂತೆ ಪ್ರಾಧ್ಯಾಪಕರು ಸೂಚಿಸಿದ್ದರು. ಮನೆಯಲ್ಲೇ ಇದ್ದುಕೊಂಡೇ ತಂತ್ರಜ್ಞಾನ ರೂಪಿಸಿದ್ದೇವೆ

- ಆಶಿಕ್ ಎಸ್‌.ವಿ, ವಿದ್ಯಾರ್ಥಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.