ADVERTISEMENT

ತಂತ್ರಜ್ಞಾನ ವರ್ಗಾವಣೆ ಒಪ್ಪಂದಕ್ಕೆ ಸಹಿ

ಜೆಎನ್‌ಸಿಎಎಸ್‌ಆರ್‌ ವಿಜ್ಞಾನಿಗಳಿಂದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 19:31 IST
Last Updated 12 ಮೇ 2022, 19:31 IST

ಬೆಂಗಳೂರು: ಜಕ್ಕೂರಿನ ಜವಾಹರ ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರವು (ಜೆಎನ್‌ಸಿಎಎಸ್‌ಆರ್‌) ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿದ ‍ಎರಡು ತಂತ್ರಜ್ಞಾನಗಳನ್ನು ಕೈಗಾರಿಕೆಗಳಿಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು.

‘ಪ್ರಯೋಗಾಲಯದಲ್ಲಿ ಕೈಗೊಂಡ ಸಂಶೋಧನೆಗಳು ಕೈಗಾರಿಕೆಗಳಿಗೆ ತಲುಪುತ್ತಿರುವುದು ಸಂತೋಷದ ಸಂಗತಿ’ ಎಂದು ಪ್ರೊ. ಸಿ.ಎನ್‌.ಆರ್‌ ರಾವ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಆ್ಯಕ್ಸಿಲರ್‌ ವೆಂಚುರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಮತ್ತು ಇನ್ಫೊಸಿಸ್‌ ಸಹ ಸಂಸ್ಥಾಪಕಕ್ರಿಸ್‌ ಗೋಪಾಲಕೃಷ್ಣ, ‘ಶಿಕ್ಷಣ ಮತ್ತು ಸಂಶೋಧನೆಗಳು ದೇಶದ ಅಭಿವೃದ್ಧಿಗೆ ತಳಪಾಯವನ್ನು ಹಾಕುತ್ತವೆ. ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ವಲಯವು ಹೂಡಿಕೆ ಮಾಡಬೇಕು’ ಎಂದು ಹೇಳಿದರು. ಜೆಎನ್‌ಸಿಎಎಸ್‌ಆರ್‌ ಅಧ್ಯಕ್ಷ ಪ್ರೊ. ಜಿ.ಯು. ಕುಲಕರ್ಣಿ ಇದ್ದರು.

ADVERTISEMENT

ವಿಜ್ಞಾನಿ ಪ್ರೊ.ಟಿ. ಗೋವಿಂದರಾಜು ಮತ್ತು ಅವರ ತಂಡ ಅಭಿವೃದ್ಧಿಪಡಿಸಿರುವ ಔಷಧವನ್ನು ಮರೆಗುಳಿ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಈ ಸಂಶೋಧನಾ ಕಾರ್ಯಕ್ಕೆ ಹಕ್ಕುಸ್ವಾಮ್ಯ ಪಡೆದುಕೊಳ್ಳಲಾಗಿದೆ.

ದೇಶದಲ್ಲಿ ಮರೆಗುಳಿ ಕಾಯಿಲೆಹೆಚ್ಚು ಮಂದಿಯನ್ನು ಬಾಧಿಸಲಿದೆ ಎಂದು ಅಧ್ಯಯನಗಳು ತಿಳಿಸಿವೆ. ದೇಶದಲ್ಲಿ ಲಭ್ಯ ಇರುವ
ಔಷಧಗಳು ತಾತ್ಕಾಲಿಕ ಪರಿಹಾರ ನೀಡುತ್ತಿವೆ. ಈಗ ಅಭಿವೃದ್ಧಿಪಡಿಸಿರುವ ಔಷಧದಿಂದ ಮರೆಗುಳಿ ಕಾಯಿಲೆ ನಿವಾರಿಸಲು ನೆರವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಹಂಸ ಬಯೋಫಾರ್ಮಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಈ ಔಷಧವನ್ನು ಪಡೆಯಲು ಜೆಎನ್‌ಸಿಎಎಸ್‌ಆರ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಔಷಧವನ್ನು ಮತ್ತಷ್ಟು ಕ್ಲಿನಿಕಲ್‌ ಪ್ರಯೋಗಾಲಯದ ಮೂಲಕ ಅಭಿವೃದ್ಧಿಪಡಿಸುವುದಾಗಿ ಕಂಪನಿ ತಿಳಿಸಿದೆ. ಕಂಪನಿಯ ರಾಮ ಮುಕುಂದ ಇದ್ದರು.

ಡಾ.ಎಸ್‌.ವಿ. ದಿವಾಕರ್‌ ಅವರ ನೇತೃತ್ವದ ಇನ್ನೊಂದು ತಂಡ ಮೊಬೈಲ್‌ ಆಮ್ಲಜನಕ ಕಾನ್ಸ್‌ಂಟ್ರೇಟರ್‌ ಅಭಿವೃದ್ಧಿಪಡಿಸಿದೆ. ಯಾವುದೇ ಸ್ಥಳದಲ್ಲಿ ಈ ಉಪಕರಣವನ್ನು ಅಳವಡಿಸಬಹುದಾಗಿದೆ. ಇದಕ್ಕೆ ‘ಆಕ್ಸಿಜನಿ’ ಎಂದು ಹೆಸರಿಡಲಾಗಿದೆ. ರುಗ್ಣ ಅಭಿಲೇಖ್‌ಗೆ ಈ ಕಾನ್ಸ್‌ಂಟ್ರೇಟರ್‌ ತಂತ್ರಜ್ಞಾನದ ಹಕ್ಕುಗಳನ್ನು ವರ್ಗಾವಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.