ADVERTISEMENT

ತೇಜಸ್ವಿ ನಿರ್ಗಮನದ ಪ್ರತಿಕ್ರಿಯೆಗಳು ಪುಸ್ತಕವಾಗಲಿ: ಸಾಹಿತಿ ಬಿ.ಎನ್. ಶ್ರೀರಾಮ್

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:27 IST
Last Updated 28 ಜುಲೈ 2024, 14:27 IST
<div class="paragraphs"><p>ಮಾಧ್ಯಮ ಅನೇಕ ಪ್ರೊಡಕ್ಷನ್‌ನ ಅರವಿಂದ್ ಮೋತಿ&nbsp;ಅವರು (ಎಡದಿಂದ ನಾಲ್ಕನೆಯವರು) ನಿರ್ಮಾಣ ಮಾಡಿರುವ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿಯನ್ನು&nbsp;ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ಬಿ.ಎನ್. ಶ್ರೀರಾಮ್, ಎಂ. ಚಂದ್ರಶೇಖರ್ ಪ್ರತಿಷ್ಠಾನದ ಸದಸ್ಯೆ ಸರೋಜ ಎಂ. ಚಂದ್ರಶೇಖರ್ ಪಾಲ್ಗೊಂಡಿದ್ದರು.</p></div>

ಮಾಧ್ಯಮ ಅನೇಕ ಪ್ರೊಡಕ್ಷನ್‌ನ ಅರವಿಂದ್ ಮೋತಿ ಅವರು (ಎಡದಿಂದ ನಾಲ್ಕನೆಯವರು) ನಿರ್ಮಾಣ ಮಾಡಿರುವ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿಯನ್ನು ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. (ಎಡದಿಂದ) ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ಬಿ.ಎನ್. ಶ್ರೀರಾಮ್, ಎಂ. ಚಂದ್ರಶೇಖರ್ ಪ್ರತಿಷ್ಠಾನದ ಸದಸ್ಯೆ ಸರೋಜ ಎಂ. ಚಂದ್ರಶೇಖರ್ ಪಾಲ್ಗೊಂಡಿದ್ದರು.

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪೂರ್ಣಚಂದ್ರ ತೇಜಸ್ವಿ ಅವರ ನಿರ್ಗಮನದ ಬಳಿಕ 1,200 ಪುಟಗಳಷ್ಟು ಪ್ರತಿಕ್ರಿಯೆಗಳು ಓದುಗರಿಂದ ಬಂದಿದ್ದವು. ಅವುಗಳು ಪುಸ್ತಕ ರೂಪದಲ್ಲಿ ಬಂದರೆ ತೇಜಸ್ವಿ ಅವರ ಬೇರೆಯದೇ ಜಗತ್ತು ತೆರೆದುಕೊಳ್ಳಲಿದೆ’ ಎಂದು ಸಾಹಿತಿ ಬಿ.ಎನ್. ಶ್ರೀರಾಮ್ ತಿಳಿಸಿದರು. 

ADVERTISEMENT

ಮೂನಿಸ್ವಾಮಿ ಆ್ಯಂಡ್‌ ಸನ್ಸ್‌, ಎಂ.ಚಂದ್ರಶೇಖರ್ ಪ್ರತಿಷ್ಠಾನ ಹಾಗೂ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು 14 ಸಂಪುಟಗಳು ಮತ್ತು ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಬಿಡುಗಡೆ, ‘ತೇಜಸ್ವಿ ಸಾಹಿತ್ಯ–ಸಾಂಸ್ಕೃತಿಕ ಹಬ್ಬ’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು.

‘ತೇಜಸ್ವಿ ಅವರ ಸಾಹಿತ್ಯ ಪ್ರಸಿದ್ಧಿಯಾಗಲು ಓದುಗರೊಂದಿಗೆ ಅವರಿಗೆ ಇದ್ದ ಸಂವಹನವೇ ಕಾರಣ. ಅವರ ಕೃತಿಗಳನ್ನು ಓದುತ್ತಿದ್ದರೆ ಸ್ವತಃ ಅವರೇ ಕಿವಿಯಲ್ಲಿ ಹೇಳಿದಂತೆ ಭಾಸವಾಗುತ್ತದೆ. ಕುವೆಂಪು ಅವರಿಂದ ಬಂದಿರುವ ತಿಳಿಹಾಸ್ಯದ ಜತೆಗೆ ಸ್ವಲ್ಪ ರಾಜಕೀಯ, ಸಾಹಿತ್ಯ ಹಾಗೂ ಸ್ವಲ್ಪ ತುಂಟಾಟವನ್ನು ಅವರ ಕೃತಿಗಳಲ್ಲಿ ಕಾಣಬಹುದು. ಕಠಿಣವಾದ ವಿಷಯಗಳನ್ನೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಲೇಖಕರಾದವರು ತಾನು ಬರೆದದ್ದು ಬೇರೆಯವರಿಗೆ ಅರ್ಥವಾಗುತ್ತದೆಯೋ ಇಲ್ಲವೋ ಎಂದು ತಿಳಿದು, ಬರೆಯಬೇಕು’ ಎಂದು ಹೇಳಿದರು. 

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಬಿಡುಗಡೆ ಮಾಡಿದ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮಾತನಾಡಿ, ‘ತೇಜಸ್ವಿ ಅವರ ಜೀವನವೇ ಒಂದು ಸಂದೇಶ. ಅವರ ವ್ಯಕ್ತಿತ್ವ ಆಶ್ಚರ್ಯ ಹುಟ್ಟಿಸುತ್ತದೆ. ಅವರು ಆಗಲೇ ಹವಾಮಾನ ವೈಪರೀತ್ಯದಂತಹ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ಪ್ರಕೃತಿಯ ವಿಕೋಪ ದೊಡ್ಡ ಸವಾಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಅವುಗಳನ್ನು ಪರಿಸರಕ್ಕೆ ಪೂರಕವಾಗಿ ಯಾವ ರೀತಿ ಅಳವಡಿಸಿಕೊಳ್ಳುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ. ಚಿದಾನಂದಗೌಡ ಮಾತನಾಡಿ, ‘ತೇಜಸ್ವಿ ಅವರು ತಮ್ಮ ಅನುಭವವನ್ನು ಕೃತಿಗಳಲ್ಲಿ ದಾಖಲಿಸಿದ್ದಾರೆ. ಇದರಿಂದ ಅವರು ನಮಗೆ ಆಪ್ತರಾಗುತ್ತಾರೆ. ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ತೇಜಸ್ವಿ ಅವರು ಆಗಲೇ ತಮ್ಮ ಕೃತಿಗಳಲ್ಲಿ ಜೀವಿಗಳಲ್ಲಿನ ‘ಸ್ವಾಭಾವಿಕ ಕೃತಕಬುದ್ಧಿಮತ್ತೆ’ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದು ಹೇಳಿದರು.

ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಸಿ. ಶಿವಾರೆಡ್ಡಿ ಮಾತನಾಡಿ, ‘ತೇಜಸ್ವಿ ಅವರ ಸಾಹಿತ್ಯದ ಓದು ಆತ್ಮವಿಶ್ವಾಸ ಹೆಚ್ಚಳ ಹಾಗೂ ಗಂಭೀರ ಬದುಕಿಗೆ ಪ್ರೇರಣೆ ನೀಡುತ್ತದೆ. ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದ ಐಟಿ–ಬಿಟಿ ಉದ್ಯೋಗಿಗಳು ಅವರ ಪ್ರೇರಣೆಯಿಂದ ಗ್ರಾಮೀಣ ಪ್ರದೇಶಕ್ಕೆ ಹೋದ ಉದಾಹರಣೆಗಳಿವೆ. ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.