ADVERTISEMENT

ದಲಿತ ಸಾಹಿತ್ಯ | ಅನುಭವ ಕಥನಕ್ಕೆ ಮಿತಿಗೊಳಿಸುವ ಹುನ್ನಾರ: ಲೇಖಕಿ ದಯಾ ಗಂಗನಘಟ್ಟ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 15:46 IST
Last Updated 25 ಡಿಸೆಂಬರ್ 2023, 15:46 IST
<div class="paragraphs"><p>ದು. ಸರಸ್ವತಿ ಅವರು ಅನುವಾದಿಸಿದ ‘ಬೀದಿಹೆಣ್ಣು’ ಪುಸ್ತಕವನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು. (ಎಡದಿಂದ) ಹುಲಿಕುಂಟೆ ಮೂರ್ತಿ, ಜ್ಯೋತಿ ನಿಶಾ, ದು. ಸರಸ್ವತಿ ಮತ್ತು ದಯಾ ಗಂಗನಘಟ್ಟ ಇದ್ದಾರೆ.</p></div>

ದು. ಸರಸ್ವತಿ ಅವರು ಅನುವಾದಿಸಿದ ‘ಬೀದಿಹೆಣ್ಣು’ ಪುಸ್ತಕವನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು. (ಎಡದಿಂದ) ಹುಲಿಕುಂಟೆ ಮೂರ್ತಿ, ಜ್ಯೋತಿ ನಿಶಾ, ದು. ಸರಸ್ವತಿ ಮತ್ತು ದಯಾ ಗಂಗನಘಟ್ಟ ಇದ್ದಾರೆ.

   

ಬೆಂಗಳೂರು: ‘ದಲಿತ ಸಾಹಿತ್ಯವನ್ನು ಅನುಭವ ಕಥನಕ್ಕೆ ಮಿತಿಗೊಳಿಸುವ ಹುನ್ನಾರ ನಡೆದಿದೆ. ಅದನ್ನು, ಸೃಜನಶೀಲ ಸಾಹಿತ್ಯದ ಬಿತ್ತಿಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಲೇಖಕಿ ದಯಾ ಗಂಗನಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

ತಮಟೆ ಮೀಡಿಯಾ, ಜಂಗಮ ಕಲೆಕ್ಟೀವ್ ಮತ್ತು ಬೀ ಕಲ್ಚರ್‌ ಸಹಯೋಗದಲ್ಲಿ ಸೋಮವಾರ ನಡೆದ ದು. ಸರಸ್ವತಿ ಅವರು ಅನುವಾದಿಸಿದ ‘ಬೀದಿಹೆಣ್ಣು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ದಲಿತ ಸಾಹಿತ್ಯವನ್ನು ಓದಬೇಕಾದ ಹೊಸ ದಾರಿಗಳನ್ನು ಸಮಾಜ ಕಂಡುಕೊಳ್ಳುವ ಅಗತ್ಯವಿದೆ. ಇಲ್ಲಿನ ಕಥೆಗಳು ರಟ್ಟೆಯ ಕಸುವಿಗೆ, ಹೊಟ್ಟೆಯ ಹಸಿವಿಗೆ ಗೌರವದ ಹೊತ್ತಿಗಾಗಿ ಜನ್ಮತಾಳಿವೆ. ದಲಿತರು ಮತ್ತು ದಲಿತ ಮಹಿಳೆಯರಿಗೆ ಬದುಕುವುದೇ ಒಂದು ಹೋರಾಟವಾಗಿದೆ. ಅವರಿಗೆ ದಕ್ಕಬೇಕಾದ್ದುದ್ದು ಮಾನವೀಯತೆ. ಆದರೆ, ಅದು ಈ ವ್ಯವಸ್ಥೆಯಲ್ಲಿ ಸಿಗುತ್ತಿಲ್ಲ’ ಎಂದರು.

‘ಮರಾಠಿ ಲೇಖಕ ಬಾಬುರಾವ್ ಬಾಗುಲ್ ಅವರ ‘ವೆನ್‌ ಐ ಹೈಡ್‌ ಮೈ ಕಾಸ್ಟ್‌’ ಎಂಬ ಪುಸ್ತಕದಲ್ಲಿ ದಲಿತೇತರರು ದಲಿತರ ನೋವಿನೊಳಗೆ ಇಳಿದು ಓದಬೇಕಾದ ಕಥೆಗಳನ್ನು ನಿರೂಪಿಸಿದ್ದಾರೆ. ದು. ಸರಸ್ವತಿ ಅವರು ಆ ಕಥೆಗಳನ್ನು ಪರಿಣಾಮಕಾರಿಯಾಗಿ ಕನ್ನಡಿಗರಿಗೆ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದರು.

ಲೇಖಕಿ ದು. ಸರಸ್ವತಿ ಅವರು ಮಾತನಾಡಿ, ಏಸುಕ್ರಿಸ್ತನ ಜನ್ಮದಿನ ಮತ್ತು ಮಹಾಡ್ ಸತ್ಯಾಗ್ರಹದ ಭಾಗವಾಗಿ ಬಾಬಾಸಾಹೇಬ ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟ ದಿನವೇ ಪುಸ್ತಕ ಬಿಡುಗಡೆ ಮಾಡಿದ ಔಚಿತ್ಯವನ್ನು ವಿವರಿಸಿದರು.

ನಿರ್ದೇಶಕಿ ಜ್ಯೋತಿ ನಿಶಾ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕವಿ ದಾದಾಪಿರ್ ಜೈಮನ್, ರೂಮಿ ಹರೀಶ್, ಪ್ರತಿಭಾ, ಅಶ್ವಿನಿ ಬೋಧ್, ಶ್ರೇಯಸ್ ಶ್ರೀನಾಥ್, ಪೂರ್ಣ ರವಿಶಂಕರ್, ಭರತ್ ರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.