
ಬೆಂಗಳೂರು: ಕೆ.ಆರ್.ಪುರ ಹೋಬಳಿಯ ಥಣಿಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶುಕ್ರವಾರವೂ ಮುಂದುವರಿಸಿದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂ. 28/1 ಮತ್ತು 28/2ರ ಎರಡು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಗೋದಾಮು ಹಾಗೂ ಗ್ಯಾರೇಜ್‌ಗಳನ್ನು ತೆರವುಗೊಳಿಸಿ, ಕೋಟ್ಯಂತ ರೂಪಾಯಿ ಮೌಲ್ಯದ ಜಾಗವನ್ನು ವಶಪಡಿಸಿಕೊಂಡಿದೆ.
ಇಟ್ಟಿಗೆಗಳ ರಾಶಿ, ಕಬ್ಬಿಣದ ವಸ್ತು, ಫ್ರಿಜ್, ಶಾಲಾ ಬ್ಯಾಗ್, ಹಾಸಿಗೆ ಸೇರಿದಂತೆ ಮನೆಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅಂದಾಜು 40 ಕುಟುಂಬಗಳು ಬೀದಿಗೆ ಬಂದಿದ್ದು, ನೂರಾರು ಜನರು ಚಳಿಯಲ್ಲಿಯೇ ದಿನ ಕಳೆಯಬೇಕಾಯಿತು.
‘ಸಂತ್ರಸ್ತರಿಗೆ ಸಮೀಪದ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿದ್ದು, ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಆಹಾರ ಮತ್ತು ಕುಡಿಯುವ ನೀರು ಒದಗಿಸಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
‘ಗುರುವಾರ ಬೆಳಿಗ್ಗೆ 6 ಗಂಟೆಗೆ ಸಿಬ್ಬಂದಿ ಬಂದು ಮನೆಗಳನ್ನು ನೆಲಸಮ ಮಾಡಲು ಆರಂಭಿಸಿದರು. ಮನೆಯಲ್ಲಿರುವ ವಸ್ತುಗಳನ್ನು ಸ್ಥಳಾಂತರಿಸಲು ಕೇವಲ ಒಂದು ಗಂಟೆ ಸಮಯ ಕೊಡುವಂತೆ ಬೇಡಿಕೊಂಡರೂ ಅನುಮತಿ ನೀಡಲಿಲ್ಲ. ಅಧಿಕಾರಿಗಳು ನಮ್ಮನ್ನು ನಾಯಿಗಳಂತೆ ನಡೆಸಿಕೊಂಡರು’ ಎಂದು ಹತ್ತು ವರ್ಷಗಳಿಂದ ವಾಸಿಸುತ್ತಿದ್ದ ನಿವಾಸಿಯೊಬ್ಬರು ಕಣ್ಣೀರಿಟ್ಟರು.
‘ಮನೆಗಳನ್ನು ನೆಲಸಮಗೊಳಿಸಿದ ಪರಿಣಾಮ ನಾವೆಲ್ಲಾ ಬೀದಿಗೆ ಬಿದ್ದಿದ್ದೇವೆ. ಯಾವ ಸಚಿವರೂ ಸಹಾಯಕ್ಕೆ ಧಾವಿಸಲಿಲ್ಲ. ಮತಗಳು ಬೇಕಾದರೆ ಮಾತ್ರ ಬರುತ್ತಾರೆ. ಅಂಗವಿಕಲರು, ಮಕ್ಕಳು, ಮಹಿಳೆಯರು ಇದ್ದಾರೆ. ನಾವು ಎಲ್ಲಿಗೆ ಹೋಗಬೇಕು? ಸಂಕಷ್ಟದಲ್ಲಿರುವ ನಮಗೆ ದಾರಿ ತೋರಿಸಿ’ ಎಂದು ಬಾಡಿಗೆದಾರ ನಾಸೀರ್ ಅಹಮದ್ ಅಳಲು ತೋಡಿಕೊಂಡರು.
‘ಕಾರ್ಯಾಚರಣೆ ವಿಷಯ ತಿಳಿದು 30 ವರ್ಷಗಳಿಂದ ವಾಸಿಸುತ್ತಿದ್ದ ನಮ್ಮ ಮನೆಯ ಮಾಲೀಕರಿಗೆ ಲಘು ಹೃದಯಾಘಾತವಾಗಿದೆ. ನಾವು ಐದು ವರ್ಷಗಳಿಂದ ಇಲ್ಲಿ ಇದ್ದೇವೆ. ಯಾವುದೇ ಸೂಚನೆ ನೀಡದೆ ಮನೆಗಳನ್ನು ಕೆಡವಿದರು. ಈಗ ಆಹಾರ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಮನೆ ಯಾರು ಕೊಡುತ್ತಾರೆ? ಬಾವಿಗಳನ್ನು ಸಹ ಮುಚ್ಚಲಾಗಿದೆ. ಮಕ್ಕಳ ಸ್ನಾನಕ್ಕೂ ನೀರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಬಿಡಿಎ ಕಾರ್ಯಾಚರಣೆಯನ್ನು ವಿರೋಧಿಸಿದ ಸ್ಯಾಮುವೆಲ್ ರಾಜ್, ‘ಇದು ಬಿಡಿಎ ಭೂಮಿಯಾಗಿದ್ದರೆ, ಉಪನೋಂದಣಾಧಿಕಾರಿ ಮಾರಾಟಕ್ಕೆ ಹೇಗೆ ಅನುಮತಿ ನೀಡಿದರು? ಮಹಾನಗರ ಪಾಲಿಕೆ ತೆರಿಗೆ ಹೇಗೆ ಕಟ್ಟಿಸಿಕೊಂಡಿತು? ವಿದ್ಯುತ್ ಸಂಪರ್ಕಗಳನ್ನು ಹೇಗೆ ನೀಡಿದರು ? ಎಂದು ಕೇಳಿದರು.