ADVERTISEMENT

‘ಪುಸ್ತಕ–ಮನುಷ್ಯನ ಸಂಬಂಧ ಕ್ಷೀಣ’

​ಪ್ರಜಾವಾಣಿ ವಾರ್ತೆ
Published 1 ಮೇ 2023, 5:44 IST
Last Updated 1 ಮೇ 2023, 5:44 IST
ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಜಂಟಿಯಾಗಿ ಅಯೋಗಿಸದ್ದ ಪುಸತಕ ಬಿಡುಗಡೆ ಸಮಾರಂಭದಲ್ಲಿ ಲೇಖಕ ಜೋಗಿ (ಎಡದಿಂದ ನಾಲಕ್ಕನೆಯವರು) ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) (ಲೇಖಕ ಹೆಚ್.ಎಸ್ ಸತ್ಯನಾರಾಯಣ, ಶ್ರೀಧರ ಬಳಗಾರ, ಎ.ಎನ್ ನಾಗರಾಜ್ ಮತ್ತು ಚಿಂತಾಮಣಿ ಕೊಡ್ಲೆಕೆರೆ ಇದ್ದರು.
ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಜಂಟಿಯಾಗಿ ಅಯೋಗಿಸದ್ದ ಪುಸತಕ ಬಿಡುಗಡೆ ಸಮಾರಂಭದಲ್ಲಿ ಲೇಖಕ ಜೋಗಿ (ಎಡದಿಂದ ನಾಲಕ್ಕನೆಯವರು) ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) (ಲೇಖಕ ಹೆಚ್.ಎಸ್ ಸತ್ಯನಾರಾಯಣ, ಶ್ರೀಧರ ಬಳಗಾರ, ಎ.ಎನ್ ನಾಗರಾಜ್ ಮತ್ತು ಚಿಂತಾಮಣಿ ಕೊಡ್ಲೆಕೆರೆ ಇದ್ದರು.   -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪುಸ್ತಕ ಮತ್ತು ಮನುಷ್ಯನ ಸಂಬಂಧ ಕ್ಷೀಣಿಸುತ್ತಿದೆ ಎಂಬ ಮಾತು ಇತ್ತೀಚೆಗೆ ನಿಜವಾಗುತ್ತಿದೆ. ಕತೆ, ಕಾದಂಬರಿಗಳನ್ನು ಬರೆಯುವಂತಹ ಲೇಖಕರ ಸಮೂಹವಿದ್ದರೂ ಓದುವವರು ಕಡಿಮೆ’ ಎಂದು ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಬೇಸರ ವ್ಯಕ್ತಪಡಿಸಿದರು. 

ಬುಕ್ ಬ್ರಹ್ಮದ ಸಹಯೋಗದಲ್ಲಿ ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಧರ ಬಳಗಾರ ಅವರ ‘ವಿಸರ್ಗ’ ಕಾದಂಬರಿ, ‘ಮಾಲತಿ ಮಾತಾಡಿದಳು’ ‌ಕಥೆಗಳು, ಚಿಂತಾಮಣಿ ಕೊಡ್ಲೆಕೆರೆ ಅವರ ‘ಭರತದ ಮಧ್ಯಾಹ್ನ’ ಕಥೆಗಳು, ಎ.ಎನ್.‌ ನಾಗರಾಜ್‌ ಅವರ ‘ಆನಂದದ ಹುಡುಕಾಟದಲ್ಲಿ’ ಅನುಭವ ಕಥನ ಕೃತಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ನಾಲ್ಕು ಕೃತಿಗಳೂ ವಿಭಿನ್ನತೆಯಿಂದ ಕೂಡಿವೆ. ‘ವಿಸರ್ಗ’ ಕೃತಿಯಲ್ಲಿ ಬರುವ ಕೆಲವು ಅಂಶಗಳು ಈ ಆಧುನಿಕ ಯುಗದಲ್ಲಿ ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿಸುತ್ತದೆ’ ಎಂದರು.

ADVERTISEMENT

ಲೇಖಕ ಎಚ್.ಎಸ್‌. ಸತ್ಯನಾರಾಯಣ, ‘ವಿಸರ್ಗ ಕಾದಂಬರಿ, ಭರತದ ಮಧ್ಯಾಹ್ನ ಕಥಾಸಂಕಲನ ವಿಭಿನ್ನ ಕಥಾಹಂದರವನ್ನು ಹೊಂದಿವೆ. ವಿಸರ್ಗ ಕಾದಂಬರಿಯಲ್ಲಿ ಬರುವ ಮೂರು ತಲೆಮಾರುಗಳ ಜೀವನದಲ್ಲಿನ ಕೆಲವೊಂದು ಸನ್ನಿವೇಶಗಳು ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಈ ಕಾದಂಬರಿಯಲ್ಲಿ ಬರುವ ಪ್ರತಿ ಪಾತ್ರಗಳು ಒಂದೊಂದು ವಿಭಿನ್ನ ಕಥೆಗಳನ್ನು ತಿಳಿಸುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ದೇವು ಪತ್ತಾರ, ‘ಆನಂದ ಹುಡುಕಾಟದಲ್ಲಿ ಕೃತಿಯಲ್ಲಿ ಒಟ್ಟು 8 ಅಧ್ಯಾಯಗಳಿವೆ. ಇದೊಂದು ಅನುಭವ ಕಥನವಾಗಿದೆ. ಬಾಲ್ಯದಿಂದ ಜೀವನದ ಪ್ರತಿಯೊಂದು ಭಾಗಗಳನ್ನು ಅಚ್ಚುಕಟ್ಟಾಗಿ ತಿಳಿಸಲಾಗಿದೆ. ಕತೆಗಳಿಗಿಂತ ಸೊಗಸಾದ ಅನುಭವ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ’ ಎಂದು ಕೃತಿಯ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.