ADVERTISEMENT

ಬೆಂಗಳೂರು: ಗಮನ ಸೆಳೆದ ‘ವಿಜ್ಞಾನ ಉತ್ಸವ’

ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 21:04 IST
Last Updated 8 ಜನವರಿ 2023, 21:04 IST
ಬೆಂಗಳೂರಿನ ಜಯನಗರದ ದಿ ನ್ಯಾಷನಲ್‌ ಕಾಲೇಜಿನಲ್ಲಿ ಬಿವಿ ಜಗದೀಶ್‌ ಸೈನ್ಸ್‌ ಸೆಂಟರ್‌, ಜವಾಹರಲಾಲ್‌ ನೆಹರೂ ತಾರಾಲಯ ಆಯೋಜಿಸಿದ 'ವಿಜ್ಞಾನ ಉತ್ಸವ'ದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸಿದರು
ಬೆಂಗಳೂರಿನ ಜಯನಗರದ ದಿ ನ್ಯಾಷನಲ್‌ ಕಾಲೇಜಿನಲ್ಲಿ ಬಿವಿ ಜಗದೀಶ್‌ ಸೈನ್ಸ್‌ ಸೆಂಟರ್‌, ಜವಾಹರಲಾಲ್‌ ನೆಹರೂ ತಾರಾಲಯ ಆಯೋಜಿಸಿದ 'ವಿಜ್ಞಾನ ಉತ್ಸವ'ದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸಿದರು   

ಬೆಂಗಳೂರು: ಇಸ್ರೊ ಉಡಾವಣೆ ಮಾಡಿದ್ದ ವಿವಿಧ ಉಪಗ್ರಹಗಳ ಮಾದರಿ, ಮಾತನಾಡುವ ರೋಬೊ, 3‘ಡಿ’ ಪ್ರಿಂಟರ್‌, ಸ್ಮಾರ್ಟ್ ಫಿಶ್‌, ತಾರಾಲಯ...

ದಿ ನ್ಯಾಷನಲ್‌ ಕಾಲೇಜಿನ ಮಲ್ಟಿ ಮೀಡಿಯಾ ಹಾಲ್‌ನಲ್ಲಿ ಆಯೋಜಿಸಿದ್ದ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳ ಗಮನ ಸೆಳೆದ ವಿಜ್ಞಾನದ ಮಾದರಿಗಳು.

ಬಿ.ವಿ.ಜಗದೀಶ್‌ ವಿಜ್ಞಾನ ಕೇಂದ್ರ ಹಾಗೂ ಜವಾಹರ್‌ಲಾಲ್‌ ನೆಹರೂ ತಾರಾಲಯದಿಂದ ಕಾಲೇಜು ಆವರಣದಲ್ಲಿ ಮೂರು ದಿನಗಳ ವಿಜ್ಞಾನ ಉತ್ಸವಕ್ಕೆ ಶುಕ್ರವಾರ ಆರಂಭಗೊಂಡಿದ್ದು, ಭಾನುವಾರ ತೆರೆಬಿದ್ದಿತು.

ADVERTISEMENT

ಕೊನೆಯ ದಿನವೂ ಹಲವು ಶಾಲೆಗಳು ನೂರಾರು ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ಕಣ್ತುಂಬಿಕೊಂಡರು ಎಂದು ಆಯೋಜಕರು ಹೇಳಿದರು.

ತಾರಾಲಯದಲ್ಲಿ ಭೂಮಿ, ಸೂರ್ಯ, ಚಂದ್ರನ ಬಗ್ಗೆ ಮಾಹಿತಿ, ಸೂರ್ಯನ ನಿಗೂಢ ರಹಸ್ಯ, ನಕ್ಷತ್ರಗಳ ಜೀವನ ಶೈಲಿ, ಸೌರಮಂಡಲ ಬಗ್ಗೆ ವಿಡಿಯೊಗಳ ಮೂಲಕ ಮಾಹಿತಿ ನೀಡಲಾಯಿತು. ಈ ಕೌತುಕವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು. ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ವೀಕ್ಷಿಸಿದರು.

ರೋಬೊ ಮುಟ್ಟಿ ಮಾತನಾಡಿಸಿದ ವಿದ್ಯಾರ್ಥಿಗಳು, ತಮಗಿಷ್ಟದ ಪ್ರಶ್ನೆ ಕೇಳಿದರು. ರೋಬೊ ಉತ್ತರಿಸಿತು. ಪ್ರಿಂಟರ್‌ ಕುರಿತು ಇದ್ದ ಸಂದೇಹಗಳನ್ನೂ ನಿವಾರಿಸಿಕೊಂಡರು.

ನೆಹರೂ ತಾರಾಲಯದ ಶಾಖ ಜನ್ಯ ವರ್ಣತ್ವ, ವಿದ್ಯುತ್ಕಾಂತೀಯ ಪ್ರೇರಣೆ, ಪ್ರತಿಫಲನದಿಂದ ಬೆಳಕಿನ ಧೃವೀಕರಣ, ಬರಹ ಅಳಿಸುವ ಆ್ಯಸಿಡ್‌, ಶಬ್ದ ಹೊಮ್ಮಿಸುವ ತಟ್ಟೆ, ಹ್ಯಾಕ್‌ ಸಾ ಬ್ಲೇಡ್‌ನಿಂದ ಸಂಗೀತ, ಸುರಳಿ ಬಳೆಗಳ ಮಾದರಿ ಉತ್ಸವದಲ್ಲಿ ಕುತೂಹಲ ಮೂಡಿಸಿದವು. ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಕುರಿತು ಮಾಹಿತಿ ನೀಡಲಾಯಿತು.

‘ಕೋವಿಡ್ ಕಾರಣಕ್ಕೆ ಎರಡು ವರ್ಷ ನಡೆದಿರಲಿಲ್ಲ. ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದು ಪ್ರತಿನಿಧಿ ಚರಣ್‌
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.