ADVERTISEMENT

ಯುವತಿ ಬೆದರಿಸಿ ವೇಶ್ಯಾವಾಟಿಕೆ: ಮಧ್ಯವರ್ತಿ ಮಹಿಳೆ ಬಂಧನ

ವರದಿಗಾರ್ತಿ ಸೋಗಿನಲ್ಲಿ ಪರಿಚಯ * ಅತ್ಯಾಚಾರ ಎಸಗಿದ್ದವರ ಪತ್ತೆಗೆ ತನಿಖೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 17:20 IST
Last Updated 20 ಆಗಸ್ಟ್ 2022, 17:20 IST
ಎಸ್‌. ಮಂಜುಳಾ
ಎಸ್‌. ಮಂಜುಳಾ   

ಬೆಂಗಳೂರು: ಸಮಸ್ಯೆ ಪರಿಹರಿಸುವ ನೆಪದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ಕೊಲೆ ಬೆದರಿಕೆಯೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ ಆರೋಪದಡಿ ಮಧ್ಯವರ್ತಿ ಮಹಿಳೆ ಸೇರಿ ಮೂವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಸ್‌. ಮಂಜುಳಾ ಅಲಿಯಾಸ್ ಲಕ್ಷ್ಮಿ (37), ಬ್ರಹ್ಮೇಂದ್ರ (26) ಹಾಗೂ ಸಾಯಿ ಆರ್ಕೆಡ್ ವಸತಿಗೃಹದ ಮಾಲೀಕ ಸಂತೋಷ್ (32) ಬಂಧಿತರು. ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ್ದ ಮಂಡ್ಯ ಜಿಲ್ಲೆಯ 25 ವರ್ಷದ ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾರಾಟ ಪ್ರತಿನಿಧಿ ಕೆಲಸ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ, ಅವರ ಜೊತೆ ಬೆಂಗಳೂರಿಗೆ ಬಂದಿದ್ದರು. ಕುಟುಂಬದವರ ವಿರೋಧದಿಂದಾಗಿ ವೈಯಕ್ತಿಕ ಸಮಸ್ಯೆಗಳು ಉಂಟಾಗಿತ್ತು. ಇವುಗಳನ್ನು ಪರಿಹರಿಸಲು ಸಹಾಯ ಮಾಡುವಂತೆ ಕೋರಿ ಹಲವರನ್ನು ಭೇಟಿಯಾಗಿದ್ದರು’ ಎಂದೂ ತಿಳಿಸಿವೆ.

ADVERTISEMENT

ವರದಿಗಾರ್ತಿ ಸೋಗಿನಲ್ಲಿ ಪರಿಚಯ: ‘ತನ್ನ ಹೆಸರು ಲಕ್ಷ್ಮಿ ಎಂಬುದಾಗಿ ಹೇಳಿಕೊಂಡು ಯುವತಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ ಮಂಜುಳಾ, ‘ನಾನು ಸುದ್ದಿ ವಾಹಿನಿಯೊಂದರ ವರದಿಗಾರ್ತಿ. ಮಾನವ ಹಕ್ಕುಗಳ ಸಂಘಟನೆಯಲ್ಲೂ ಸಕ್ರಿಯವಾಗಿದ್ದೇನೆ. ನಿನ್ನ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ’ ಎಂದಿದ್ದಳು. ಇದನ್ನು ಯುವತಿ ನಂಬಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜಾಜಿನಗರದಲ್ಲಿರುವ ನವಭಾರತ ಸಂಘಟನೆ ಕಚೇರಿಗೆ ಯುವತಿಯನ್ನು ಕರೆದೊಯ್ದಿದ್ದ ಆರೋಪಿ, ಸಮಸ್ಯೆ ಪರಿಹಾರವಾಗುವವರೆಗೂ ಕಚೇರಿಯ ಕೊಠಡಿಯಲ್ಲೇ ಉಳಿದುಕೊಳ್ಳುವಂತೆ ಹೇಳಿದ್ದಳು. ಅದಕ್ಕೂ ಯುವತಿ ಒಪ್ಪಿದ್ದರು.’

‘ಆಗಸ್ಟ್ 14ರಂದು ಯುವತಿಯನ್ನು ಶಿವಾನಂದ ವೃತ್ತದಲ್ಲಿರುವ ಸಾಯಿ ಆರ್ಕೆಡ್ ವಸತಿಗೃಹಕ್ಕೆ ಕರೆದೊಯ್ದಿದ್ದ ಆರೋಪಿ ಮಂಜುಳಾ, ‘ನಾನು ಹೇಳಿದವರ ಜೊತೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲದಿದ್ದರೆ, ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ಹಲ್ಲೆ ಮಾಡಿ ಯುವತಿಯನ್ನು ಗ್ರಾಹಕರೊಬ್ಬರ ಬಳಿ ಕಳುಹಿಸಿದ್ದರು. ಇದಾದ ನಂತರವೂ ರೌಡಿಗಳು ಸೇರಿದಂತೆ ಹಲವರು, ಮೆಜೆಸ್ಟಿಕ್‌ನಲ್ಲಿರುವ ಕೆಲ ವಸತಿಗೃಹಗಳಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಆರೋಪಿಗಳನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘ಇನ್ನೊಬ್ಬ ಆರೋಪಿ ಬ್ರಹ್ಮೇಂದ್ರ, ಗ್ರಾಹಕರನ್ನು ಕರೆದುಕೊಂಡು ಬರುತ್ತಿದ್ದ. ಇಂಥ ಗ್ರಾಹಕರಿಂದ ಹಣ ಪಡೆದ ಮಂಜುಳಾ, ಯುವತಿ ಬಳಿ ಕಳುಹಿಸುತ್ತಿದ್ದಳು. ವೇಶ್ಯಾವಾಟಿಕೆಯಿಂದ ಬಂದ ಹಣವನ್ನು ಆರೋಪಿಗಳೇ ಹಂಚಿಕೊಳ್ಳುತ್ತಿದ್ದರು. ಮತ್ತೊಬ್ಬ ಆರೋಪಿ ಸಂತೋಷ್, ವಸತಿಗೃಹದಲ್ಲಿ ಕೊಠಡಿ ನೀಡಿ ಕೃತ್ಯಕ್ಕೆ ಸಹಕಾರ ನೀಡಿದ್ದ’ ಎಂದೂ ಹೇಳಿವೆ.

’ಮಧ್ಯವರ್ತಿ ಮಂಜುಳಾ, ನಾನಾ ಹೆಸರು ಹೇಳುತ್ತಿದ್ದಳು. ಹಲವು ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.