ADVERTISEMENT

ಬೆಂಗಳೂರು| ಮನೆ ತೊರೆದಿದ್ದ ಯುವಕನ ಬಳಿಯಿಂದ ಚಿನ್ನಾಭರಣ ಕಳ್ಳತನ: ಆಟೊ ಚಾಲಕನ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2024, 23:40 IST
Last Updated 7 ಮೇ 2024, 23:40 IST
ಸಾದಿಕ್ ಅಲಿಯಾಸ್ ಅನಿಲ್
ಸಾದಿಕ್ ಅಲಿಯಾಸ್ ಅನಿಲ್   

ಬೆಂಗಳೂರು: ಮನೆಯಲ್ಲಿ ಬೈದರೆಂಬ ಕಾರಣಕ್ಕೆ ಮನೆ ಬಿಟ್ಟು ಬಂದಿದ್ದ ಯುವಕನ ಬಳಿಯಿಂದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಸಾದಿಕ್ ಅಲಿಯಾಸ್ ಅನಿಲ್‌ (30) ಅವರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಂ.ಎಸ್.ಪಾಳ್ಯ ಬಳಿಯ ಸಿಂಗಾಪುರದ ಸಾದಿಕ್, ಏಪ್ರಿಲ್ 2ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಈತನಿಂದ ₹ 6.50 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಚಿನ್ನದ ಉಂಗುರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೊಡ್ಡನೆಕ್ಕುಂದಿಯ ಕಾಲೇಜೊಂದರಲ್ಲಿ ಯುವಕ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತರ ಜೊತೆ ಹೆಚ್ಚು ಸುತ್ತಾಡುತ್ತಿದ್ದರು. ಅದೇ ವಿಚಾರವಾಗಿ ತಂದೆ ಬೈದಿದ್ದರು. ಅದರಿಂದ ನೊಂದಿದ್ದ ಯುವಕ, ಏಪ್ರಿಲ್ 2ರಂದು ಮನೆ ಬಿಟ್ಟು ಹೋಗಿದ್ದರು. ನಾಪತ್ತೆ ಬಗ್ಗ ಸಂಬಂಧಿಕರು ಠಾಣೆಗೆ ದೂರು ನೀಡಿದ್ದರು.’

ADVERTISEMENT

‘ಒಡಿಶಾದ ಪುರಿ ಜಗನ್ನಾಥ್ ದೇವಸ್ಥಾನಕ್ಕೆ ಯುವಕ ಹೋಗಿದ್ದರು. ಮಾಹಿತಿ ಬರುತ್ತಿದ್ದಂತೆ ಏಪ್ರಿಲ್ 4ರಂದು ಒಡಿಶಾಗೆ ಹೋಗಿ ಯುವಕನನ್ನು ರಕ್ಷಿಸಿ ನಗರಕ್ಕೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಯುವಕನ ಬಳಿ ಚಿನ್ನದ ಸರ ಹಾಗೂ ಉಂಗುರ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಆಟೊ ಚಾಲಕ ಕಳ್ಳತನ ಮಾಡಿದ್ದ ಸಂಗತಿ ಬಾಯ್ಬಿಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ದೊಡ್ಡನೆಕ್ಕುಂದಿ ಸಮೀಪದ ಬಸವನಗರ ಬಸ್ ತಂಗುದಾಣ ಬಳಿ ನಿಂತಿದ್ದ ಯುವಕ, ಮೆಜೆಸ್ಟಿಕ್‌ಗೆ ಹೋಗಲು ಆಟೊ ಹುಡುಕಾಡುತ್ತಿದ್ದರು. ತಮ್ಮ ಬಳಿಯ ಚಿನ್ನದ ಸರ ಹಾಗೂ ಉಂಗುರವನ್ನು ಬಿಚ್ಚಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಅದನ್ನು ನೋಡಿದ್ದ ಚಾಲಕ ಸಾದಿಕ್, ಆಟೊವನ್ನು ಯುವಕನ ಬಳಿ ತೆಗೆದುಕೊಂಡು ಹೋಗಿದ್ದ. ಮೆಜೆಸ್ಟಿಕ್‌ಗೆ ಹೋಗುವುದಾಗಿ ಹೇಳಿ ಹತ್ತಿಸಿಕೊಂಡಿದ್ದ.’

‘ಮಾರ್ಗಮಧ್ಯೆ ಮೂತ್ರವಿಸರ್ಜನೆಗೆಂದು ಆರೋಪಿ ಆಟೊ ನಿಲ್ಲಿಸಿದ್ದ. ಯುವಕ ಸಹ ಆಟೊದಿಂದ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಚಾಲಕ, ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ. ಅದೇ ಚಿನ್ನಾಭರಣವನ್ನು ಪತ್ನಿಯ ಹೆಸರಿನಲ್ಲಿ ಗಿರವಿ ಇರಿಸಿದ್ದ. ಆಟೊದ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಿದಾಗ, ಚಾಲಕ ಸಿಕ್ಕಿಬಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.