ADVERTISEMENT

ಸಿನಿಮಾ ನೋಡಿ ಕಳ್ಳತನಕ್ಕೆ ಸಂಚು; ಬಟ್ಟೆ ಅಂಗಡಿಯ ಎ.ಸಿ. ಡಕ್ಟ್ ಮೂಲಕ ಪರಾರಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 4:11 IST
Last Updated 6 ಮಾರ್ಚ್ 2022, 4:11 IST
   

ಬೆಂಗಳೂರು: ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಜಿಗಣಿ ನಿವಾಸಿ ಆನಂದ್, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಜ. 31ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಕಳ್ಳತನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ, ವ್ಯವಸ್ಥಿತವಾಗಿ ಸಂಚು ರೂಪಿಸಿ ಕೃತ್ಯ ಎಸಗುತ್ತಿದ್ದ. ಬಟ್ಟೆ ಅಂಗಡಿಗೆ ಹಲವು ಬಾರಿ ಭೇಟಿ ನೀಡಿದ್ದ ಆರೋಪಿ, ಯಾವ ರೀತಿ ಕಳ್ಳತನ ಮಾಡಬೇಕೆಂದು ತಿಳಿದುಕೊಂಡಿದ್ದ. ಕಳ್ಳತನದ ನಂತರ, ಮಳಿಗೆಯಿಂದ ಪರಾರಿಯಾಗುವುದು ಹೇಗೆ ಎಂಬುದನ್ನೂ ಯೋಚಿಸಿದ್ದ’ ಎಂದೂ ತಿಳಿಸಿದರು.

ADVERTISEMENT

ಕಿಟಕಿ ಸರಳು ಮುರಿದು ಒಳನುಗ್ಗಿದ್ದ: ‘ಬಹುಮಹಡಿ ಕಟ್ಟಡದಲ್ಲಿ ಬಟ್ಟೆ ಮಳಿಗೆ ಇದೆ. ಐದನೇ ಮಹಡಿ ಕಿಟಕಿಯ ಕಬ್ಬಿಣದ ಸರಳು ಮುರಿದಿದ್ದ ಆರೋಪಿ, ಅದರ ಮೂಲಕವೇ ಮಳಿಗೆಯೊಳಗೆ ನುಗ್ಗಿದ್ದ’ ಎಂದು ಪೊಲೀಸರು ಹೇಳಿದರು.

‘ನಗದು ವಿಭಾಗದ ಡ್ರಾನಲ್ಲಿಟ್ಟಿದ್ದ ₹ 6.50 ಲಕ್ಷವನ್ನು ಆರೋಪಿ ಕದ್ದಿದ್ದ. ನಂತರ, ಮಳಿಗೆಯ ಹವಾನಿಯಂತ್ರಕ (ಎ.ಸಿ) ಡಕ್ಟ್‌ನಿಂದ ಹೊರಗೆ ಬಂದು ಪರಾರಿಯಾಗಿದ್ದ. ಕೃತ್ಯದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಕ್ಯಾಮೆರಾದ ಡಿವಿಆರ್‌ನ್ನೇ ಆರೋಪಿ ಕದ್ದೊಯ್ದಿದ್ದ. ಈಗ ₹ 5.8 ಲಕ್ಷ ನಗದು ಹಾಗೂ ಡಿವಿಆರ್ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಭಾರತಿನಗರ, ಜೀವನ್‌ಭಿಮಾನಗರ, ಮೈಕೊ ಲೇಔಟ್, ಮಂಡ್ಯ, ಶಿವಮೊಗ್ಗ ಸೇರಿ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಎಸಗಿರುವ ಮಾಹಿತಿ ಲಭ್ಯವಾಗಿದೆ.

ಸಿನಿಮಾ ನೋಡಿ ಕೃತ್ಯಕ್ಕೆ ಸಂಚು: ‘ಆರೋಪಿ ಆನಂದ್, ’ನಿಷ್ಕರ್ಷ’ ಸಿನಿಮಾವನ್ನು ಹಲವು ಬಾರಿ ನೋಡಿದ್ದ. ಬ್ಯಾಂಕ್‌ಗೆ ನುಗ್ಗಿದ್ದ ಕಳ್ಳರು ಹವಾನಿಯಂತ್ರಕ ವ್ಯವಸ್ಥೆಯ ಕೊಳವೆ ಮೂಲಕ ಪರಾರಿಯಾಗುವ ದೃಶ್ಯ ಸಿನಿಮಾದಲ್ಲಿದೆ. ಅದನ್ನು ನೋಡಿಯೇ ಆರೋಪಿ, ಮಳಿಗೆಯಿಂದ ಪರಾರಿಯಾಗಲು ಇದೇ ವಿಧಾನ ಅನುಸರಿಸಿದ್ದ. ಈ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.