ADVERTISEMENT

ಐಷಾರಾಮಿ ವಿಲ್ಲಾಗಳಲ್ಲಿ ಕಳ್ಳತನ: ತ್ರಿಪುರಾ ನಿವಾಸಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 22:11 IST
Last Updated 24 ಸೆಪ್ಟೆಂಬರ್ 2024, 22:11 IST
ಕೊತ್ತನೂರು ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ವೀಕ್ಷಿಸಿದರು. 
ಕೊತ್ತನೂರು ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ವೀಕ್ಷಿಸಿದರು.    

ಬೆಂಗಳೂರು: ನಗರದ ಐಷಾರಾಮಿ ವಿಲ್ಲಾಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತ್ರಿಪುರಾದ ಅಮಿತ್ ದೇಬಾರಿಯಾ (22) ಎಂಬುವವರನ್ನು ಬಂಧಿಸಿ, ₹21 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಗಳ 32 ವಾಚ್‌ಗಳು, 3,900 ಅಮೆರಿಕನ್ ಡಾಲರ್‌ ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಂಧನದಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಂಬತ್ತು ಪ್ರಕರಣಗಳು ಪತ್ತೆಯಾಗಿವೆ.

ಕೆ.ನಾರಾಯಣಪುರ ವಿಲ್ಲಾ ನಿವಾಸಿಯೊಬ್ಬರು ಮನೆಯ ಮಹಡಿ ಬಾಗಿಲು ಹಾಕಲು ಮರೆತು, ನಿದ್ರೆಗೆ ಜಾರಿದ್ದರು. ವಾಚ್‌, ಮೊಬೈಲ್, ಪರ್ಸ್‌ ಊಟದ ಟೇಬಲ್‌ ಮೇಲೆ ಇರಿಸಿದ್ದರು. ಮಾರನೇ ದಿನ ಬೆಳಿಗ್ಗೆ ನೋಡಿದಾಗ ವಸ್ತುಗಳು ಕಳವಾಗಿದ್ದವು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ದೊರೆತ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ನಗರದ ಐಷಾರಾಮಿ ವಿಲ್ಲಾಗಳಲ್ಲಿ ಕಳ್ಳತನ ಮಾಡುತ್ತಿದ್ದುದನ್ನು ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮಿತ್‌, ಏಳು ವರ್ಷದ ಹಿಂದೆ ನಗರಕ್ಕೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಕೊತ್ತನೂರಿನಲ್ಲಿ ನೀರಿನ ಟ್ಯಾಂಕರ್‌ಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ರಾತ್ರಿ ವೇಳೆ ತಂಗುತ್ತಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿ ಅಮಿತ್ ಊಟಕ್ಕಾಗಿ ವಿಲ್ಲಾಗಳಿಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಡುಗೆ ಮನೆಗೆ ತೆರಳಿ ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ಕೈಗೆ ಸಿಕ್ಕ ವಸ್ತುಗಳು, ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ. ಕದ್ದ ವಸ್ತುಗಳನ್ನು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಬಚ್ಚಿಡುತ್ತಿದ್ದ’ ಎಂದು ತಿಳಿಸಿದ್ದಾರೆ. 

ಅಮಿತ್ ದೇಬಾರಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.