ಬೆಂಗಳೂರು: ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿ, ₹ 80 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ಲಾವಣ್ಯ ಮತ್ತು ಮೀನಾ ಎಂಬುವರನ್ನು ಬಂಧಿಸಿ, ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 855 ಗ್ರಾಂ ಹಾಗೂ ಮನೆಯಲ್ಲಿ ಬಚ್ಚಿಟ್ಟಿದ್ದ 44 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ಕಳೆದ ವರ್ಷ ಅಕ್ಟೋಬರ್ 18ರಂದು ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್ ಹತ್ತುವ ವೇಳೆ ಅವರ ಬ್ಯಾಗ್‌ನಲ್ಲಿದ್ದ 156 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. ಖಚಿತ ಮಾಹಿತಿ ಮೇರೆಗೆ ಗಾಂಧಿನಗರದಲ್ಲಿರುವ ಸಾಯಿ ಯಾತ್ರಿ ನಿವಾಸ್ ಲಾಡ್ಜ್‌ನಲ್ಲಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು.
ಆರೋಪಿಗಳು ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು, ಬ್ಯಾಗ್‌ನಿಂದ ಆಭರಣ ಕಳವು ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಕರೂರು ವೈಶ್ಯ ಬ್ಯಾಂಕ್ ತಿರಪ್ಪತ್ತೂರಿನಲ್ಲಿ ಅಡವಿಟ್ಟಿದ್ದ ಹಾಗೂ ಆರೋಪಿ ಮನೆಯಿಂದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಕೆ.ಆರ್.ಪುರ ಠಾಣೆ 4, ಮಹದೇವಪುರ ಪೊಲೀಸ್ ಠಾಣೆ 2, ಯಶವಂತಪುರ ಹಾಗೂ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಆರು ಮಂದಿ ಬಂಧನ: ಮನೆ ಬೀಗ ಒಡೆದು ಕಳವು ಮಾಡುತ್ತಿದ್ದ ಪಶ್ಚಿಮ ಬಂಗಾಳದ ಲಾಡಿಯಾ ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸಿರುವ ಪೀಣ್ಯ ಪೊಲೀಸರು, ₹27 ಲಕ್ಷ ಮೌಲ್ಯದ 452 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಲಾಡಿಯಾ ಜಿಲ್ಲೆಯ ಸುವೆಂಶರ್ ಶೀಲ್, ಹರಿದಾಸ್ ಸೋಮನ್ ಸೇರಿ ಆರು ಮಂದಿ ಎರಡು ಆಭರಣ ಅಂಗಡಿಯಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಕದ್ದ ವಸ್ತು ಅಡವಿಟ್ಟುಕೊಂಡಿದ್ದ ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಪೀಣ್ಯದ ಗೃಹಲಕ್ಷ್ಮೀ ಬಡಾವಣೆಯ ಮನೆಗೆ ಬೀಗ ಹಾಕಿಕೊಂಡು ಅಮೆರಿಕದಲ್ಲಿರುವ ಮಗಳ ಮನೆಗೆ ಹೋಗಿದ್ದ ತಂದೆಯು ಅಣ್ಣನಿಗೆ ಕರೆ ಮಾಡಿ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲವೆಂದು ಹೇಳಿದ್ದಾರೆ. ಅವರು ಮನೆ ಬಳಿ ಹೋಗಿ ನೋಡಿದಾಗ ಮನೆಯ ಹಿಂಬಾಗಿಲ ಬೀಗ ಮುರಿದು, ಆಭರಣ ಕಳವು ಮಾಡಿರುವುದು ಗೊತ್ತಾಗಿದೆ.
ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ಎಚ್.ಎಂ.ಟಿ ಲೇಔಟ್‍ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದರು. ಬಳಿಕ ಆರೋಪಿಗಳೊಂದಿಗೆ ಪಶ್ಚಿಮ ಬಂಗಾಳಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಹಾಗೂ ಅಂಗಡಿ ಮಾಲೀಕರಿಬ್ಬರನ್ನು ಬಂಧಿಸಿದರು.
ಆರೋಪಿಗಳ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆಯ-3, ರಾಮಮೂರ್ತಿನಗರ -2, ಬಾಗಲಗುಂಟೆ, ಸೋಲದೇವನಹಳ್ಳಿ, ಬಾಣಸವಾಡಿ, ಇಂದಿರಾನಗರ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ತಲಾ ಒಂದು ಸೇರಿ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.