
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕಳ್ಳತನದ ಮಾಡಿದ ಚಿನ್ನಾಭರಣಗಳನ್ನು ಮನೆಯಲ್ಲೇ ಕರಗಿಸಿ, ಬಿಸ್ಕೆಟ್ ಮಾಡಿ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗವಾರದಲ್ಲಿ ವಾಸವಿದ್ದ, ಆಂಧ್ರಪ್ರದೇಶದ ಮೆಹಬೂಬ್‌ಖಾನ್ ಪಠಾಣ್ ಎಂಬಾತನನ್ನು ಬಂಧಿಸಿ, 478 ಗ್ರಾಂ ಚಿನ್ನಾಭರಣ, 1 ಕೆ.ಜಿ. 550 ಗ್ರಾಂ ಬೆಳ್ಳಿ ವಸ್ತುಗಳು, ₹4.60 ಲಕ್ಷ ನಗದು, ದ್ವಿಚಕ್ರ ವಾಹನ ಸೇರಿ ₹65.28 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. ನಗರದ ವಿವಿಧ ಠಾಣೆಯ ಪೊಲೀಸರು ಬಾಡಿ ವಾರಂಟ್ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಮಾರ್ಚ್ 17ರಂದು ಜೆ.ಪಿ.ನಗರದ 20ನೇ ಮುಖ್ಯರಸ್ತೆಯಲ್ಲಿರುವ ಕಿರುತೆರೆ ನಟನ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ನಟನ ಪತ್ನಿ ದೂರು ನೀಡಿದ್ದರು. ಮಾರ್ಚ್ 11ರಂದು ನಟ ಚಿತ್ರೀಕರಣಕ್ಕೆ ತೆರಳಿದ್ದು, ದೂರುದಾರೆ ಮನೆಯ ಬೀಗದ ಕೀಯನ್ನು ಚಪ್ಪಲಿ ಬಾಕ್ಸ್‌ನಲ್ಲಿ ಇರಿಸಿ ಹೊಸಕೋಟೆಯಲ್ಲಿರುವ ಅತ್ತೆಯ ಮನೆಗೆ ಹೋಗಿದ್ದರು. ಹಾಗಾಗಿ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಚಪ್ಪಲಿ ಬಾಕ್ಸ್‌ನಲ್ಲಿಟ್ಟಿದ್ದ ಕೀಯನ್ನು ತೆಗೆದುಕೊಳ್ಳಲು ಹೇಳಿದ್ದರು. ಅದರಂತೆ ಆ ಸ್ನೇಹಿತ ಮನೆಯ ಕೀಯನ್ನು ತೆಗೆದುಕೊಂಡು, ಡಂಝೊ ಮೂಲಕ ಅದನ್ನು ಹೊಸಕೋಟೆಯಲ್ಲಿರುವ ಮನೆಗೆ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಹೊಸಕೋಟೆಯಿಂದ ಮಹಿಳೆ ಮನೆಗೆ ಬಂದಾಗ ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಜತೆಗೆ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಆಭರಣ ಕಾಣಿಸಲಿಲ್ಲ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು ಎಂದು ಹೇಳಿದರು.
ಮನೆಯಲ್ಲೇ ಕರಗಿಸಿ ಮಾರಾಟ: ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮನೆಯಲ್ಲೇ ಕರಗಿಸಿ ಚಿನ್ನದ ಬಿಸ್ಕೆಟ್ ತಯಾರಿಸಿ ಆಭರಣ ಅಂಗಡಿಗಳಿಗೆ ಮಾರುತ್ತಿದ್ದ. ಇತ್ತೀಚೆಗೆ ಕಳವು ಮಾಡಿದ್ದ ಚಿನ್ನವನ್ನು ಚನ್ನರಾಯಪಟ್ಟಣದಲ್ಲಿ ಆಭರಣ ಅಂಗಡಿಗೆ ಕೊಟ್ಟಿದ್ದ. ಕೆಲವನ್ನು ತನ್ನ ಮನೆಯಲ್ಲೇ ಇರಿಸಿದ್ದ. ಎಲ್ಲವನ್ನೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಜೆ.ಪಿ.ನಗರ ಠಾಣಾಧಿಕಾರಿ ವಿ.ಹರೀಶ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
‘ರಾತ್ರಿ ಕಣ್ಣು ಸರಿಯಾಗಿ ಕಾಣಲ್ಲ’
‘ಆರೋಪಿಗೆ ರಾತ್ರಿ ವೇಳೆ ಕಣ್ಣು ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ಬೆಳಿಗ್ಗೆಯೇ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ. ಹಲವು ವರ್ಷಗಳಿಂದ ನಾಗವಾರದ ಸಾರಾಯಿ ಪಾಳ್ಯದಲ್ಲಿ ಆರೋಪಿ ವಾಸವಾಗಿದ್ದು ಕೃತ್ಯವೆಸಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.