ADVERTISEMENT

ವಾರ್ಡ್‌ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆಗೆ ಚಿಂತನೆ: ಕೆ. ನಾಗಣ್ಣಗೌಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 14:14 IST
Last Updated 23 ಸೆಪ್ಟೆಂಬರ್ 2024, 14:14 IST
ಬೆಂಗಳೂರು ನಗರದ ಪ್ರತಿ ವಾರ್ಡ್‌ನಲ್ಲೂ ಮಕ್ಕಳ ರಕ್ಷಣಾ ಸಮಿತಿಗಳು ರಚಿಸುವಂತೆ ಕೆ. ನಾಗಣ್ಣಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. (ಎಡದಿಂದ) ನಾಗಸಿಂಹ ಜಿ. ರಾವ್, ಎ. ನರಸಿಂಹಮೂರ್ತಿ, ಚಂದ್ರಮ್ಮ ಉಪಸ್ಥಿತರಿದ್ದರು            ಪ್ರಜಾವಾಣಿ ಚಿತ್ರ
ಬೆಂಗಳೂರು ನಗರದ ಪ್ರತಿ ವಾರ್ಡ್‌ನಲ್ಲೂ ಮಕ್ಕಳ ರಕ್ಷಣಾ ಸಮಿತಿಗಳು ರಚಿಸುವಂತೆ ಕೆ. ನಾಗಣ್ಣಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. (ಎಡದಿಂದ) ನಾಗಸಿಂಹ ಜಿ. ರಾವ್, ಎ. ನರಸಿಂಹಮೂರ್ತಿ, ಚಂದ್ರಮ್ಮ ಉಪಸ್ಥಿತರಿದ್ದರು            ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ರಚಿಸುವ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.

ಸ್ಲಂ ಜನಾಂದೋಲನ ಸಮಿತಿ ಸೋಮವಾರ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳ ಸಂರಕ್ಷಣೆ, ನಗರ ಪ್ರದೇಶಗಳಲ್ಲಿ ಮಕ್ಕಳ ವಾರ್ಡ್‌ ಸಮಿತಿ ರಚನೆ ಕುರಿತು ಸಮುದಾಯದ ಮುಖಂಡರಿಗೆ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರ ಪ್ರದೇಶಗಳಲ್ಲಿ ಬೀದಿ ಮಟ್ಟದ ಮಕ್ಕಳ ಸಮಿತಿ ಅಥವಾ ವಾರ್ಡ್‌ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ರಚಿಸುವ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಮುಂದಿನ ವಾರ ಸಭೆ ಆಯೋಜಿಸಲಾಗಿದೆ. ಆ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈ ಜೋಡಿಸಬೇಕು. ಮಕ್ಕಳ ಸಮಿತಿಗಳಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ಶೋಷಣೆ ಹಾಗೂ ಮಾನವ ಕಳ್ಳ ಸಾಗಣೆಯ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ಸ್ಲಂ ಜನಾಂದೋಲನ ಸಮಿತಿಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ‘ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮಕ್ಕಳ ಸಂಖ್ಯೆಯೂ ಅಧಿಕವಾಗುತ್ತಿದೆ. ಅದರೊಂದಿಗೆ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಕೊಳೆಗೇರಿಗಳಲ್ಲಿ ಶಾಲೆಯಿಂದ ಹೊರಗಿರುವ ಮಕ್ಕಳು, ಬಾಲ ಕಾರ್ಮಿಕರಾಗಿ ದುಡಿಯುವುದು, ಬಾಲ್ಯವಿವಾಹ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಬೆಂಗಳೂರು ನಗರದ ಪ್ರತಿ ವಾರ್ಡ್‌ನಲ್ಲೂ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ. ರಾವ್ ಅವರು ನಗರ ಪ್ರದೇಶಗಳಲ್ಲಿ ಮಕ್ಖಳ ವಾರ್ಡ್‌ ಸಮಿತಿ ರಚನೆ ಕುರಿತು ವಿಷಯ ಮಂಡಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಸಂಚಾಲಕಿ ಚಂದ್ರಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.