ADVERTISEMENT

ಬೆಂಗಳೂರು: ಶಿವಾಜಿನಗರ, ಪಾದರಾಯನಪುರ ಸೀಲ್‌ಡೌನ್‌ಗೆ ಬಿಬಿಎಂಪಿ ಆದೇಶ

ಗಲ್ಲಿಗಲ್ಲಿ ರಸ್ತೆಗಳೂ ಬ್ಲಾಕ್ | ಜನರು ಬೀದಿಗಿಳಿದರೆ ಶಿಸ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 8:01 IST
Last Updated 10 ಏಪ್ರಿಲ್ 2020, 8:01 IST
ಶಿವಾಜಿನಗರದ ರಸೆಲ್ ಮಾರ್ಕೆಟ್ (ಸಂಗ್ರಹ ಚಿತ್ರ)
ಶಿವಾಜಿನಗರದ ರಸೆಲ್ ಮಾರ್ಕೆಟ್ (ಸಂಗ್ರಹ ಚಿತ್ರ)   
""

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಪೂರ್ವ ವಿಭಾಗದ ಶಿವಾಜಿನಗರ ಮತ್ತು ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಾದರಾಯನಪುರ ಪ್ರದೇಶದಲ್ಲಿ ಕಟ್ಟುನಿಟ್ಟಿನಸೀಲ್‌ಡೌನ್ಪ್ರಾಯೋಗಿಕ ಜಾರಿಗೆ ಬಿಬಿಎಂಪಿ ಗುರುವಾರ ಆದೇಶ ಮಾಡಿದೆ.

ಪೂರ್ವ ವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸೀಲ್‌ಡೌನ್ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಗುರುವಾರಹಿರಿಯ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದ್ದರು.

ಬೆಂಗಳೂರಿನ ಪಾದರಾಯನಪುರ ಮತ್ತು ಜೆ.ಜೆ.ಆರ್‌.ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಪತ್ತೆಗೆ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್ ಜಾರಿಗೆ ಬಿಬಿಎಂಪಿ ಆದೇಶ ನೀಡಿದೆ.

ಸದ್ಯ ನಗರವನ್ನು ಲಾಕ್‌ಡೌನ್ ಮಾಡಿ, ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ. ಆದರೆ, ಬಹುತೇಕರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಗರವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಚರ್ಚೆ ನಡೆದಿದೆ.

ADVERTISEMENT

ಪೂರ್ವ ವಿಭಾಗದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಸೀಲ್‌ಡೌನ್‌ ಜಾರಿಗೆ ತಂದು, ಅಲ್ಲಿಯ ಪ್ರತಿಕ್ರಿಯೆ ನೋಡಿಕೊಂಡು ಉಳಿದ ವಿಭಾಗಗಳಿಗೂ ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

‘ಹಲಸೂರು, ಇಂದಿರಾನಗರ, ಬೈಯಪ್ಪನಹಳ್ಳಿ, ಮಹದೇವಪುರ, ಪುಲಿಕೇಶಿನಗರ, ಜೆ.ಬಿ.ನಗರ, ಭಾರತಿನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಕೆ.ಆರ್.ಪುರ, ರಾಮಮೂರ್ತಿನಗರ, ಹೆಣ್ಣೂರು ಹಾಗೂ ಬಾಣಸವಾಡಿ ಠಾಣೆಗಳು ‍ಪೂರ್ವ ವಿಭಾಗ ವ್ಯಾಪ್ತಿಗೆ ಬರುತ್ತವೆ. ಇಲ್ಲೆಲ್ಲ ಸೀಲ್‌ಡೌನ್‌ ಜಾರಿ ಬಗ್ಗೆ ಯೋಚಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸೀಲ್‌ಡೌನ್‌ ಜಾರಿಗೆ ಬಂದರೆ ಮುಖ್ಯ ರಸ್ತೆ,ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಎಲ್ಲ ಒಳ ರಸ್ತೆಗಳನ್ನು ಬಂದ್ ಮಾಡಲಾಗುವುದು. ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ದಿನಸಿ ಹಾಗೂ ಇತರೆ ವಸ್ತುಗಳನ್ನು ಮನೆಗೇ ತಲುಪಿಸುವ ವ್ಯವಸ್ಥೆ ಇರಲಿದೆ. ಇನ್ನು ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.