
ಬೆಂಗಳೂರು: ಸ್ಪಾ ಮಾಲೀಕರೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಗೊಟ್ಟಿಗೆರೆ ನಿವಾಸಿಗಳಾದ ಅಕ್ಷಯ್, ಮಂಜುನಾಥ್, ಪ್ರಜ್ವಲ್ ಬಂಧಿತರು. ಅವರಿಂದ ಕಾರು, ಮಾರಕಾಸ್ತ್ರ, ಮೂರು ಮೊಬೈಲ್ ಹಾಗೂ ₹9 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಬೇಗೂರಿನ ಅಕ್ಷಯ್‌ನಗರದಲ್ಲಿ ಇರುವ ಸ್ಪಾ ವ್ಯವಸ್ಥಾಪಕ ಮುನ್ನುಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸ್ಪಾ ಮಾಲೀಕ ಆಶಿತ್ ಕುಮಾರ್ ಅವರನ್ನು ಆರೋಪಿಗಳು ಅಪಹರಿಸಿ ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದರು.
‘ಆಶಿತ್ ಕುಮಾರ್ ಹಾಗೂ ಮುನ್ನುಕುಮಾರ್ ಅವರು ಸ್ಪಾ ಸೆಂಟರ್‌ನ ಬಾಗಿಲು ಹಾಕಿ, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬೆಟ್ಟದಾಸನಪುರದ ಅರೇನಾ ಸ್ಪೋರ್ಟ್ಸ್ ರಸ್ತೆಯಲ್ಲಿ ಸಾಗುವಾಗ ಕಾರಿನಲ್ಲಿ ಬಂದಿದ್ದ ಮೂವರು, ದ್ವಿಚಕ್ರ ವಾಹನ ಅಡ್ಡಗಟ್ಟಿದ್ದರು. ಬಳಿಕ, ಇಬ್ಬರ ಮೇಲೂ ಆರೋಪಿಗಳು ಮಾರಕಾಸ್ತ್ರಗಳಿದ ಹಲ್ಲೆ ಮಾಡಿದ್ದರು. ಆಶಿತ್ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು. ಮುನ್ನುಕುಮಾರ್ ಅವರು ಆರೋಪಿಗಳಿಂದ ತಪ್ಪಿಸಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಪ್ರಕರಣದ ತನಿಖೆ ನಡೆಸಿದಾಗ, ಎಸ್.ಬಿಂಗಿಪುರದಲ್ಲಿ ಆರೋಪಿಗಳು ಅಡಗಿರುವುದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಪಹರಣದ ಬಳಿಕ ಸ್ಪಾ ವ್ಯವಸ್ಥಾಪಕರಿಗೆ ಕರೆ ಮಾಡಿದ್ದ ಆರೋಪಿಗಳು, ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.
ಬಂಧಿತರ ಪೈಕಿ, ಮಂಜುನಾಥ್ ಅವರು ಗೊಟ್ಟಿಗೆರೆಯ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡು ಆ ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಸಿದ್ದರು. ಅಲ್ಲಿಯೂ ಹಣ ಕಳೆದುಕೊಂಡಿದ್ದರು. ಬಳಿಕ, ಸ್ನೇಹಿತರ ಜತೆಗೆ ಸೇರಿಕೊಂಡು ಸ್ಪಾ ಮಾಲೀಕ ಹಾಗೂ ವ್ಯವಸ್ಥಾಪಕರನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.