ADVERTISEMENT

ಟಿಪ್ಪರ್ ಡಿಕ್ಕಿ: 35 ವಿದ್ಯುತ್‌ ಕಂಬಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 14:14 IST
Last Updated 24 ಆಗಸ್ಟ್ 2024, 14:14 IST
ಟಿಪ್ಪರ್‌ ಡಿಕ್ಕಿಯಿಂದ ಮುರಿದಿರುವ ವಿದ್ಯುತ್‌ ಕಂಬ
ಟಿಪ್ಪರ್‌ ಡಿಕ್ಕಿಯಿಂದ ಮುರಿದಿರುವ ವಿದ್ಯುತ್‌ ಕಂಬ   

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಯಂತ್ರ ತುಂಬಿದ್ದ ಟಿಪ್ಪರ್‌ವೊಂದು‌ ಡಿಕ್ಕಿ ಹೊಡೆದು 35 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಅಕ್ಕಪಕ್ಕದ 35 ಕಂಬಗಳು ಧರೆಗೆ ಉರುಳಿದವು. ತಕ್ಷಣವೇ ಸ್ಥಳೀಯರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಅವರು ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಚಿಕ್ಕಬಾಣಾವರ ಸಂಚಾರ ಪೊಲೀಸರು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದರು. ಘಟನೆಯಿಂದ ಕೆಲವು ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ADVERTISEMENT

ಕಂಬಗಳು ಉರುಳಿ ಬಿದ್ದಿದ್ದರಿಂದ ಸುತ್ತಮುತ್ತಲ ಹಲವು ಬಡಾವಣೆ ಹಾಗೂ ಚಿಕ್ಕಬಾಣಾವರ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಶನಿವಾರ ದಿನವಿಡಿ ಕಂಬಗಳ ಬದಲಾವಣೆ ಹಾಗೂ ವಿದ್ಯುತ್‌ ಮಾರ್ಗ ದುರಸ್ತಿ ಕಾರ್ಯ ನಡೆಯಿತು.

‘ಟಿಪ್ಪರ್‌ ಡಿಕ್ಕಿಯಿಂದ ಒಂದು ವಿದ್ಯುತ್ ಪರಿವರ್ತಕ, ಕಡಿಮೆ ಹಾಗೂ ಅಧಿಕ ಒತ್ತಡದ ಕೇಬಲ್‌ಗಳು ಹಾಗೂ 35 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಚಾಲಕನ ಮೇಲೆ ಚಿಕ್ಕಬಾಣಾವರ ಸಂಚಾರ ಠಾಣೆಯಲ್ಲಿ ದೂರು ನೀಡಲಾಗಿದೆ. ಟಿಪ್ಪರ್ ಅನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಸೋಲದೇವನಹಳ್ಳಿ ಬೆಸ್ಕಾಂ ಸಹಾಯಕ ಎಂಜಿನಿಯರ್ ಭರತ್ ತಿಳಿಸಿದರು.

ದುರಸ್ತಿ ಕಾರ್ಯ ನಡೆಸಿದ ಬೆಸ್ಕಾಂ ಸಿಬ್ಬಂದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.