
ವಿಧಾನಸೌಧ
ಬೆಂಗಳೂರು: ತಿರುಪತಿಯ ತಿರುಮಲದಲ್ಲಿರುವ ‘ಕರ್ನಾಟಕ ಪ್ರವಾಸಿ ಸೌಧ’ದ ನಿರ್ವಹಣೆಯ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವುದರಿಂದ ಸೌಧದ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ಹಸ್ತಾಂತರಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.
ಎಂಟು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡ ಈ ಕಟ್ಟಡವು ಕರ್ನಾಟಕದ ಯಾತ್ರಿಗಳಿಗಾಗಿ ಸುಮಾರು 300 ಕೊಠಡಿಗಳನ್ನು ಹೊಂದಿದೆ. ಯಾತ್ರಿ ನಿವಾಸಗಳ ನಿರ್ವಹಣೆಯಲ್ಲಿ ಕೆಎಸ್‌ಟಿಡಿಸಿ ಪರಿಣತಿ ಹೊಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಇಲ್ಲಿನ ಕೊಠಡಿಗಳಿಗೆ ಒಂದು ದಿನಕ್ಕೆ ₹2,000 ದಿಂದ ₹4,900ರವರೆಗೆ ದರ ನಿಗದಿ ಮಾಡಲಾಗಿದೆ. ಇಲಾಖೆಯಿಂದ ನಿಗಮಕ್ಕೆ ಹಸ್ತಾಂತರವಾದ ಬಳಿಕ ದರಗಳು ದುಬಾರಿಯಾಗಬಹುದು ಮತ್ತು ಧಾರ್ಮಿಕ ಕೇಂದ್ರವು ವಾಣಿಜ್ಯೀಕರಣಗೊಳ್ಳಬಹುದು ಎಂಬ ಆತಂಕವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದ ಯಾತ್ರಿಕರಿಗೆ ಸಹಾಯ ಮಾಡಲು ಮುಜರಾಯಿ ಇಲಾಖೆಯು ಆಸ್ತಿಯ ಮೇಲೆ ಕೋಟಿಗಟ್ಟಲೆ ಖರ್ಚು ಮಾಡಿದೆ. ಈಗ, ಅದನ್ನು ಕೆಎಸ್‌ಟಿಡಿಸಿಗೆ ಹಸ್ತಾಂತರಗೊಳಿಸುವುದು ಸರಿಯಲ್ಲ’ ಎಂದು ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿ ತಿರುಪತಿಗೆ ಭೇಟಿ ನೀಡುವ ವಸಂತ್ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ವಸತಿ ಸೌಕರ್ಯವು ದೇವಾಲಯಕ್ಕೆ ಬಹಳ ಹತ್ತಿರದಲ್ಲಿದೆ. ಇದು ಕರ್ನಾಟಕದ ಯಾತ್ರಿಕರಿಗೆ ಉಳಿದುಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಈಗ ಕೈಗೆಟುಕುವ ದರಗಳಿದ್ದು, ಮುಂದೆ ಹೆಚ್ಚು ಮಾಡಿದರೆ ಯಾತ್ರಿಗಳಿಗೆ ನಷ್ಟವಾಗಲಿದೆ ಎಂದು ಮತ್ತೊಬ್ಬ ಯಾತ್ರಿ ಆತಂಕ ವ್ಯಕ್ತಪಡಿಸಿದರು.
ದರ ಹೆಚ್ಚಳವಿಲ್ಲ: ರಾಮಲಿಂಗಾರೆಡ್ಡಿ
ಮುಜರಾಯಿ ಇಲಾಖೆಯು ವಸತಿ ಸೌಕರ್ಯದ ದರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತದೆ. ದರ ಹೆಚ್ಚಾಗುವುದಿಲ್ಲ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ‘ಬೆಡ್‌ಶೀಟ್‌ಗಳನ್ನು ಪ್ರತಿದಿನ ಬದಲಾಯಿಸಬೇಕು. ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ನಿರ್ವಹಣೆ ತುಂಬಾ ಕಳಪೆಯಾಗಿದೆ ಎಂಬ ದೂರು ಬಂದಿರುವುದರಿಂದ ನಿರ್ವಹಣೆಗಾಗಿ ಕೆಎಸ್‌ಟಿಡಿಸಿಗೆ ಒಪ್ಪಿಸುವುದು ಒಳ್ಳೆಯದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಮುಂದೆಯೂ ದರ ನಿರ್ಧರಿಸುವ ಅಧಿಕಾರವು ಮುಜರಾಯಿ ಇಲಾಖೆಯದ್ದಾಗಿರುತ್ತದೆ. ಲಾಭವನ್ನು ಕೆಎಸ್‌ಟಿಡಿಸಿ ಮತ್ತು ಮುಜರಾಯಿ ಇಲಾಖೆಯ ನಡುವೆ ಹಂಚಿಕೊಳ್ಳಲಾಗುತ್ತದೆ. ಈ ಪ್ರಸ್ತಾವವನ್ನು ಶೀಘ್ರದಲ್ಲೇ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಇಡಲಾಗುವುದು’ ಎಂದು ಹೇಳಿದ್ದಾರೆ.
ಕಳಪೆ ನಿರ್ವಹಣೆ: ಟಿಟಿಡಿ ಟ್ರಸ್ಟಿ ನರೇಶ್
‘ಕಟ್ಟಡ ನಿರ್ಮಾಣಗೊಂಡು ಒಂದು ವರ್ಷ ಕೂಡ ಆಗಿಲ್ಲ. ನಿರ್ವಹಣೆ ತೀರ ಕಳಪೆಯಾಗಿದೆ. ಚಪ್ಪಲಿ ಧರಿಸದೆ ಕೊಠಡಿಗೆ ಕಾಲಿಡಲೂ ಸಾಧ್ಯವಿಲ್ಲ. ಹಳೇ ಕಟ್ಟಡ ಎಂಬಂತೆ ಭಾಸವಾಗುತ್ತಿದೆ’ ಎಂದು ತಿರುಮಲ ತಿರುಪತಿ ದೇವಸ್ಥಾನಗಳ ಟ್ರಸ್ಟ್ ಮಂಡಳಿಯ ಸದಸ್ಯ ಎಸ್. ನರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ‘ತಿರುಮಲದ ಪ್ರಮುಖ ಸ್ಥಳದಲ್ಲಿ ಈ ಸೌಧ ಇದೆ. ಅನೇಕ ರಾಜ್ಯಗಳಿಗೆ ಇಂಥ ಪ್ರಯೋಜನ ಸಿಕ್ಕಿಲ್ಲ. ಆದರೆ ಈ ಅನುಕೂಲ ಸದ್ಬಳಕೆಯಾಗುತ್ತಿಲ್ಲ’ ಎಂದು ಹೇಳಿದರು.