
ಬೆಂಗಳೂರು: ‘ಕನ್ನಡ ರಂಗಭೂಮಿಯ ಬೆಳವಣಿಗೆ ದೃಷ್ಟಿಯಿಂದ ರಾಜ್ಯದಾದ್ಯಂತ ರಂಗ ಪರಿಷೆ ನಡೆಯುವಂತಾಗಬೇಕು’ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅಭಿಪ್ರಾಯಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯ ಐದನೇ ದಿನವಾದ ಗುರುವಾರ ನಡೆದ ಕಾರ್ಯಕ್ರಮದಲ್ಲಿ, ರಂಗಕರ್ಮಿಗಳಾದ ಜನಾರ್ದನ್ (ಜನ್ನಿ) ಮತ್ತು ಬಿ.ಐ. ಈಳಿಗೇರ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸೀತಾರಾಮ್, ‘ರಂಗ ಪರಿಷೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಣೀಯವಾಗಿ ಮಾಡಲಾಗುತ್ತಿದೆ. ಈ ರೀತಿಯ ನಾಟಕದ ಜಾತ್ರೆಗಳು ಹೆಚ್ಚೆಚ್ಚು ನಡೆಯಬೇಕು. ರಂಗಭೂಮಿಯು ನಮಗೆ ಸೌಜನ್ಯ, ಕನ್ನಡತನ, ನಾಟಕೀಯತೆ ಹಾಗೂ ಬದುಕಿನಲ್ಲಿ ಅನ್ವೇಷಣೆಗೆ ಬೇಕಾದ ಅಮೂಲ್ಯ ವಸ್ತುಗಳನ್ನು ನೀಡುತ್ತದೆ’ ಎಂದು ಹೇಳಿದರು.
ಕವಿ ಎಚ್.ಎಸ್. ಶಿವಪ್ರಕಾಶ್, ‘ಇಲ್ಲಿ ಅಂತರರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿರುವುದು ಸಂತಸದ ಸಂಗತಿ. ಮುಂದಿನ ವರ್ಷಗಳಲ್ಲಿ ನಾಟಕ ಅಕಾಡೆಮಿಯೇ ಸ್ವತಂತ್ರವಾಗಿ ಈ ಉತ್ಸವ ನಡೆಸುವಂತಾಗಬೇಕು’ ಎಂದು ಹಾರೈಸಿದರು.
40 ವರ್ಷ ಪೂರೈಸಿರುವ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರ ಮತ್ತು ಹೊಸಪೇಟೆಯ ಭಾವೈಕ್ಯತಾ ವೇದಿಕೆ ತಂಡಗಳಿಗೆ ಇದೇ ವೇಳೆ ‘ರಂಗ ಗೌರವ’ ನೀಡಿ ಸನ್ಮಾನಿಸಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ರಿಜಿಸ್ಟ್ರಾರ್ ನೀಲಮ್ಮ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ’ ಕವಿಗೋಷ್ಠಿ ನಡೆಯಿತು. ಕವಯತ್ರಿ ಕೆ.ಎಸ್. ರಂಜನಿ ಪ್ರಭು ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪುಲಿಗೆರೆ ಸಂಪದಾ, ಎಸ್. ಗೋವಿಂದಪ್ಪ ಪಾವಗಡ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಪ್ರಿಯದರ್ಶಿನಿ ಎಂ., ಆಂಥೋನಿ ರಾಜ್ ಆರ್., ಹಾಜೀರಾ ಖಾನಂ, ನಾಗೇಂದ್ರಸ್ವಾಮಿ ಚಿದರವಳ್ಳಿ, ರಂಗೇಗೌಡ ಕೆ.ಎಸ್., ಶ್ರೀಕಾಂತ ಪತ್ರೆಮರ, ಮನೆಮಾರಿಗೆ ರಂಗಸ್ವಾಮಿ, ಬಳೆಪೇಟೆ ಪ್ರಕಾಶ್, ಎನ್.ನಿಸರ್ಗ ಅವರು ಕವಿಗೋಷಿಯಲ್ಲಿ ಭಾಗವಹಿಸಿದ್ದರು.
ನಾಟಕಕ್ಕೆ ಉತ್ತಮ ಸ್ಪಂದನೆ
ಬ್ರೆಜಿಲ್‌ನ ಝೆಂಟುರೋ ತಂಡ ಪ್ರದರ್ಶಿಸಿದ ‘ಪಾಸ್ಟ್ ಪ್ರೆಸೆಂಟ್ ಝೆಂಟುರೋ’ ನಾಟಕಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. 250 ಆಸನಗಳ ಸಭಾಂಗಣದಲ್ಲಿ 400ಕ್ಕೂ ಅಧಿಕ ಮಂದಿ ಕಿಕ್ಕಿರಿದು ಸೇರಿದ್ದರು.
ಬೆಂಗಳೂರು ಪ್ರದರ್ಶನ ಕಲಾ ವಿಭಾಗದಿಂದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ಮತ್ತು ಯುವ ರಂಗ ಸಂಭ್ರಮದಲ್ಲಿ ‘ಸಂದಿಗ್ಧ’ ನಾಟಕಗಳು ಪ್ರದರ್ಶನಗೊಂಡವು. ವಿಶ್ವನಾಥ್ ನಾಕೋಡ್ ಅವರು ಹಿಂದೂಸ್ತಾನಿ ಗಾಯನ ಮತ್ತು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು. ನೂಪುರ ಫೈನ್ ಆರ್ಟ್ಸ್ ಅಕಾಡೆಮಿಯು ‘ಕನಕ ವೈಭವ’ ನೃತ್ಯ ರೂಪಕ ಪ್ರದರ್ಶಿಸಿತು. ರಂಗ ಸಂಗ್ರಹ ತಂಡದಿಂದ ‘ಸ್ವಚ್ಛ…. ಮಾಡಬೇಕು’ ಮತ್ತು ಪ್ರಕೃತಿ ಕಲಾ ತಂಡದಿಂದ ‘ಹಸಿವು-ಕನಸು’ ಕಿರು ನಾಟಕ ಪ್ರದರ್ಶನಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.