ADVERTISEMENT

ಹೈಬ್ರಿಡ್ ಟೊಮೆಟೊ ಬೆಳೆದು ಕಷ್ಟಕ್ಕೆ ಸಿಲುಕಿದ ರೈತ: ಜನರಿಗೆ ಉಚಿತವಾಗಿ ವಿತರಣೆ

ದರ ಕುಸಿತದಿಂದ ಬೇಸತ್ತು ಜನರಿಗೆ ಉಚಿತವಾಗಿ ವಿತರಣೆ

ಚಿಕ್ಕ ರಾಮು
Published 21 ಮೇ 2021, 19:30 IST
Last Updated 21 ಮೇ 2021, 19:30 IST
ಸಾರ್ವಜನಿಕರಿಗೆ ಉಚಿತವಾಗಿ ಹಂಚಲು ರಸ್ತೆ ಬದಿಯಲ್ಲಿ ಸುರಿದಿರುವ ಟೊಮೆಟೊ ಹಣ್ಣು
ಸಾರ್ವಜನಿಕರಿಗೆ ಉಚಿತವಾಗಿ ಹಂಚಲು ರಸ್ತೆ ಬದಿಯಲ್ಲಿ ಸುರಿದಿರುವ ಟೊಮೆಟೊ ಹಣ್ಣು   

ರಾಜರಾಜೇಶ್ವರಿನಗರ: ದೇಶ ವಿದೇಶಗಳಿಗೆ ರಫ್ತಾಗುತ್ತಿದ್ದ ಹೈಬ್ರಿಡ್(4262) ಟೊಮೆಟೊ ಹಣ್ಣನ್ನು ಕೇಳುವವರೇ ದಿಕ್ಕಿಲ್ಲ. ಇದರಿಂದ ಕಂಗಾಲಾಗಿರುವ ತಾವರೆಕೆರೆ ಹೋಬಳಿ ರೈತರೊಬ್ಬರು ಟೊಮೊಟೊ ಹಣ್ಣನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡ್ಡೇರಿ ಬಳಿಯ ರಾಮನಾಯಕನ ತಾಂಡ್ಯದ ಗಿಲ್ಕಾನಾಯ್ಕ ಅವರು ತಮ್ಮ 5 ಎಕರೆ ಜಮೀನಿನಲ್ಲಿ ಹೈಬ್ರಿಡ್ ಟೊಮೊಟೊ ಬೆಳೆದಿದ್ದಾರೆ. ಫಸಲು ಉತ್ತಮವಾಗಿದ್ದರೂ, ಲಾಕ್‌ಡೌನ್ ಕಾರಣಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

ಕೋಲಾರದ ಎಪಿಎಂಸಿಯಿಂದ ಅಸ್ಸಾಂ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಶ್ರೀಲಂಕಾಕ್ಕೆ ಈ ಹೈಬ್ರಿಡ್ ಟೊಮೆಟೊ ಕಳುಹಿಸಲಾಗುತ್ತದೆ. ಪ್ರತಿ ಬಾಕ್ಸ್‌ಗೆ 17 ಕೆ.ಜಿ ಹಣ್ಣು ತುಂಬಿಸಿ ಕೋಲಾರ ಮಾರುಕಟ್ಟೆ ತನಕ ತೆಗೆದುಕೊಂಡು ಹೋಗುವುದು ರೈತರ ಜವಾಬ್ದಾರಿ. ಲಾಕ್‌ಡೌನ್ ಇರುವ ಕಾರಣ ಈಗ ಟೊಮೆಟೊ ರಫ್ತಾಗುತ್ತಿಲ್ಲ. ಹೀಗಾಗಿ, ಒಂದು ಬಾಕ್ಸ್ ಟೊಮೆಟೊಗೆ ₹10 ದರ ಸಿಗುತ್ತಿದೆ. ಜೊತೆಗೆ ಸಾಗಣೆ ವೆಚ್ವವೂ ಈಗ ಮೂರ್ನಾಲ್ಕು ಪಟ್ಟು ಅಧಿಕವಾಗಿದೆ. ಎಪಿಎಂಸಿ ಸುಂಕ(ಶೇ 10) ಮತ್ತು ಗೂಡ್ಸ್‌ ವಾಹನದಿಂದ ಇಳಿಸುವ ಕೂಲಿ ಸೇರಿದರೆ ರೈತ ಬರಿಗೈನಲ್ಲಿ ವಾಪಸ್ ಬರಬೇಕಾದ ಸ್ಥಿತಿ ಇದೆ.

ADVERTISEMENT

ಇದರಿಂದ ಬೇಸತ್ತಿರುವ ಗಿಲ್ಕಾನಾಯ್ಕ ಅವರು ರಸ್ತೆ ಬದಿಯಲ್ಲಿ ಟಾರ್ಪಲ್ ಹಾಸಿ ಟೊಮೆಟೊ ಸುರಿದ ಸಾರ್ವಜನಿಕರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

‘ಈ ಬೆಳೆ ಬೆಳೆಯಲು ಸಹಕಾರ ಬ್ಯಾಂಕ್‌ನಲ್ಲಿ ₹75 ಸಾವಿರ ಮತ್ತು ಖಾಸಗಿಯವರಿಂದ ₹6 ಲಕ್ಷ ಸಾಲ ಮಾಡಿದ್ದೇನೆ. ಒಟ್ಟಾರೆ ₹10 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಈಗ ಟೊಮೆಟೊ ಕೇಳುವವರೇ ಇಲ್ಲವಾಗಿದ್ದು, ನಮ್ಮ ಬದುಕು ಮೂರಾಬಟ್ಟೆಯಾಗಿದೆ’ ಎಂದು ಗಿಲ್ಕಾನಾಯ್ಕ ಅಳಲು ತೋಡಿಕೊಂಡರು.

‘ಪಂಪ್‌ ಸೆಟ್‌ಗೆ ರಾತ್ರಿ ವೇಳೆ ನಾಲ್ಕು ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಹಗಲು –ರಾತ್ರಿ ಎನ್ನದೆ ನಿದ್ರೆಗೆಟ್ಟು ಕೆಲಸ ಮಾಡಿದ್ದೇವೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ನಡುವೆ ಬೆಳೆದಿದ್ದ ಬೆಳೆಯನ್ನು ಬೀದಿಯಲ್ಲಿ ಸುರಿಯುವ ಸ್ಥಿತಿ ಬಂದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಒಂದು ಬಾಕ್ಸ್ ಟೊಮೆಟೊಗೆ ಕನಿಷ್ಠ ₹100 ಸಿಗಬೇಕು. ಈಗ ₹10ಕ್ಕೂ ಕೇಳುವವರಿಲ್ಲ. ಸಾಲು ತೀರಿಸಲು ಬೇರೆ ದಾರಿ ಇಲ್ಲದೆ ವಿಷ ಕುಡಿಯಬೇಕಾದ ಸಂದರ್ಭ ಬಂದಿದೆ’ ಎಂದು ಕಣ್ಣೀರಿಟ್ಟರು.

‘ದಾಸನಪುರ, ಯಶವಂತಪುರ ಎಪಿಎಂಸಿಗೆ ತೆಗೆದುಕೊಂಡು ಹೋದರೆ ಒಂದು ಬಾಕ್ಸ್‌ಗೆ ₹15 ದರದಲ್ಲಿ ಕೇಳುತ್ತಾರೆ. ಅದೇ ಟೊಮೆಟೊ ಅಂಗಡಿಗಳಲ್ಲಿ ಕೆ.ಜಿಗೆ ₹10 ದರದಲ್ಲಿ ಮಾರಾಟವಾಗುತ್ತಿದೆ. ರೈತ ಮತ್ತು ಗ್ರಾಹಕ ಇಬ್ಬರಿಗೆ ಹೊರೆಯಾಗಿದ್ದು, ಮಧ್ಯವರ್ತಿಗಳು ಲಾಕ್‌ಡೌನ್ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿ ರೈತರಿಗೆ ಆಗುವ ಅನ್ಯಾಯ ತಡೆಯಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.