ADVERTISEMENT

ಸಂಚಾರ ದಂಡ ರಿಯಾಯಿತಿ ನಾಳೆ ಕೊನೆ: ದಿನ ವಿಸ್ತರಣೆಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 21:38 IST
Last Updated 9 ಫೆಬ್ರುವರಿ 2023, 21:38 IST
   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ 50ರಷ್ಟು ರಿಯಾಯಿತಿಯಡಿ ದಂಡ ಪಾವತಿಸಲು ನಾಳೆ (ಫೆ. 11) ಕೊನೆ ದಿನವಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ, ರಿಯಾಯಿತಿ ಸೌಲಭ್ಯದ ದಿನಾಂಕವನ್ನು ವಿಸ್ತರಣೆ ಮಾಡುವಂತೆ ಸಂಚಾರ ಪೊಲೀಸರು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಕೋರಿದ್ದಾರೆ.

ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ಸಂಚಾರ ನಿಯಮ ಉಲ್ಲಂಘನೆಯ ಇ–ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ ರಿಯಾಯಿತಿ ನೀಡಿ ಫೆ. 2ರಂದು ಆದೇಶ ಹೊರಡಿಸಿತ್ತು. ಫೆ. 3ರಿಂದ ದಂಡ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ.

ಏಳನೇ ದಿನವಾದ ಗುರುವಾರದವರೆಗೆ ₹ 65.93 ಕೋಟಿ ದಂಡ ಸಂಗ್ರಹವಾಗಿದ್ದು, 23.73 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ.

ADVERTISEMENT

ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ), ನಗರದ ಹಲವು ಸಂಚಾರ ಪೊಲೀಸ್ ಠಾಣೆಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಜನರು ದಂಡ ತುಂಬುತ್ತಿದ್ದಾರೆ.

‘ದಂಡದ ಮೇಲಿನ ರಿಯಾಯಿತಿಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ರಿಯಾಯಿತಿ ಸೌಲಭ್ಯ ದಿನಾಂಕವನ್ನು ವಿಸ್ತರಣೆ ಮಾಡಿದರೆ ಅನುಕೂಲವೆಂದು ತಿಳಿಸಲಾಗಿದೆ’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ನಕಲಿ ನೋಂದಣಿ ಫಲಕದ ವಿರುದ್ಧ ಪ್ರಕರಣ: ವಾಹನಗಳಿಗೆ ನಕಲಿ ನೋಂದಣಿ ಸಂಖ್ಯೆ ಫಲಕ ಅಳವಡಿಸುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

‘ನಕಲಿ ನೋಂದಣಿ ಫಲಕದಿಂದ ಅಮಾಯಕರಿಗೆ ದಂಡ ಬೀಳುತ್ತಿದೆ. ಯಾರಾದರೂ ನಕಲಿ ಫಲಕ ಹಾಕಿಕೊಂಡಿದ್ದು ಗೊತ್ತಾದರೆ, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಇನ್‌ಸ್ಪೆಕ್ಟರ್‌ಗಳಿಗೆ ವಿಶೇಷ ಕಮಿಷನರ್ ಸೂಚನೆ ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.