ADVERTISEMENT

ಬೆಂಗಳೂರು: ಸಂಚಾರ ದುಸ್ತರ- ವಾಹನ ಸವಾರರಿಗೆ ಸಂಕಟ

ಸುಜಾತಾ ವೃತ್ತದ ಬಳಿ ಹೆಚ್ಚುತ್ತಿರುವ ದಟ್ಟಣೆ

ಸಚ್ಚಿದಾನಂದ ಕುರಗುಂದ
Published 25 ಅಕ್ಟೋಬರ್ 2021, 19:30 IST
Last Updated 25 ಅಕ್ಟೋಬರ್ 2021, 19:30 IST
ನಗರದ ಮಾಗಡಿ ರಸ್ತೆಯ ಕಸ್ತೂರಿನಗರ ಮೈಸೂರು ಡಿವಿಯೇಷನ್ ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿ -ಪ್ರಜಾವಾಣಿ ಚಿತ್ರ
ನಗರದ ಮಾಗಡಿ ರಸ್ತೆಯ ಕಸ್ತೂರಿನಗರ ಮೈಸೂರು ಡಿವಿಯೇಷನ್ ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಸ್ತೆ ಕಾಮಗಾರಿಗಳಿಂದ ಕಿರಿದಾಗಿರುವ ರಸ್ತೆಗಳು, ಗ್ಲೋಬಲ್‌ ಮಾಲ್ಸ್‌ನಿಂದ ಹೆಚ್ಚಿದ ದಟ್ಟಣೆ, ಆಮೆಗತಿಯಲ್ಲಿ ಸಾಗುವ ವಾಹನಗಳು, ವಾರಾಂತ್ಯದಲ್ಲಿ ಇಲ್ಲಿ ಸಂಚರಿಸುವುದೇ ಹರಸಾಹಸ, ಗಂಟೆಗಳ ಕಾಲ ರಸ್ತೆಯಲ್ಲೇ ಕಾಯಬೇಕಾದ ಸಂಕಟ, ಜತೆಗೆ ದೂಳು...

– ಇದು ಓಕಳಿಪುರದಿಂದ ರಾಜಾಜಿನಗರ ಹಾಗೂ ಮಾಗಡಿ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಸಂಕಟ ಅನುಭವಿಸಬೇಕಾದ ದುಃಸ್ಥಿತಿ ಇದು. ನಗರದ ಹೃದಯ ಭಾಗದಲ್ಲಿರುವ ಸುಜಾತಾ ವೃತ್ತದ ಬಳಿಯ ಈ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವುದು ದಿನೇ ದಿನೇ ದುಸ್ತರವಾಗುತ್ತಿದೆ.

ಮೆಜಿಸ್ಟಿಕ್‌ ಬಳಿಯ ರೈಲ್ವೆ ಸೇತುವೆಯಿಂದ ರಾಜಾಜಿನಗರದತ್ತ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸಬೇಕಾಗಿದೆ. ರಸ್ತೆಗಳು ಕಿರಿದಾಗುತ್ತಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ವಾಹನಗಳು ತೆವಳುತ್ತ ಸಾಗುತ್ತವೆ. ವಾರಾಂತ್ಯದ ದಿನಗಳಲ್ಲಿ ವಾಹನಗಳ ಸಂಚಾರ 8–10 ಪಟ್ಟು ಹೆಚ್ಚುತ್ತದೆ. ಆಗ ಕನಿಷ್ಠ ಒಂದು ಗಂಟೆ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ತುಮಕೂರಿನತ್ತ ತೆರಳುವ ಪ್ರಮುಖ ರಸ್ತೆಯೂ ಇದಾಗಿರುವುದರಿಂದ ಸಹಜವಾಗಿಯೇ ವಾಹನಗಳು ಸಂಖ್ಯೆ ಹೆಚ್ಚಾಗುತ್ತಿದೆ.

ADVERTISEMENT

ಇತ್ತೀಚೆಗೆ ಗ್ಲೋಬಲ್‌ ಮಾಲ್‌ನ ಲುಲು ಹೈಪರ್‌ ಮಾರ್ಕೆಟ್‌ ಸಹ ಆರಂಭವಾಗಿರುವುದರಿಂದ ಸಂಚಾರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಇಲ್ಲಿ ಬರುತ್ತಾರೆ. ಜಾತ್ರೆಯ ಸ್ವರೂಪ ಪಡೆಯುತ್ತಿದೆ. ಇದರಿಂದ, ಮೊದಲೇ ವಿಪರೀತ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಈಗ ಮಾಲ್‌ಗೆ ಹೋಗುವ ಮತ್ತು ಹೊರಗೆ ಬರುವ ವಾಹನಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ.

‘ತುಮಕೂರು ರಸ್ತೆಯತ್ತ ತೆರಳುವ ಎಲ್ಲ ವಾಹನಗಳು ಮತ್ತು ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ ಮುಂತಾದ ಕಡೆಯ ಜನರು ಬಳಸುವ ಅತಿ ವಾಹನ ದಟ್ಟಣೆಯ ರಸ್ತೆ ಇದಾಗಿದೆ. ವಾಣಿಜ್ಯ ಉದ್ದೇಶದ ಮಾಲ್‌ ನಿರ್ಮಿಸುವಾಗ ವಾಹನಗಳ ಸಂಚಾರದ ಬಗ್ಗೆಯೂ ಯೋಚಿಸಬೇಕಾಗಿತ್ತು. ಸರ್ಕಾರಿ ಇಲಾಖೆಗಳು ನಿರ್ಮಾಣಕ್ಕೆ ಅನುಮತಿ ನೀಡುವ ಮುನ್ನವೇ ಎಚ್ಚರವಹಿಸಿದ್ದರೆ ಈಗಿನ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲವೇ?’ ಎಂದು ಸ್ಥಳೀಯ ನಿವಾಸಿ ಶಂಕರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಮಾರ್ಗದಲ್ಲಿ ಮುಖ್ಯವಾಗಿ ವ್ಯವಸ್ಥಿತವಾದ ಪಾದಚಾರಿ ಮಾರ್ಗ ಇಲ್ಲ. ಸಮೀಪದಲ್ಲಿರುವ ಬಸ್‌ ತಂಗುದಾಣಕ್ಕೆ ತೆರಳಲು ಒಬ್ಬರೇ ದಾಟುವಷ್ಟು ಇರುವ ಹಾದಿಯಲ್ಲಿ ಸಾಗಬೇಕು. ಮೊದಲು ಪಾದಚಾರಿ ಮಾರ್ಗ ವಿಸ್ತರಣೆಯಾಗಬೇಕು. ಈಗ ವಾಹನಗಳ ಸಂಚಾರ ದಿನನಿತ್ಯ ಹೆಚ್ಚುತ್ತಿರುವುದರಿಂದ ವ್ಯವಸ್ಥಿತವಾದ ಯೋಜನೆಯನ್ನು ಈಗಲೇ ರೂಪಿಸಬೇಕು’ ಎಂದು ಸಂಚಾರಿ ಪೊಲೀಸರೊಬ್ಬರು ಹೇಳುತ್ತಾರೆ.

‘ವಾಹನ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ಮಾಲ್‌ಗೆ ತೆರಳುವ ಕೆಳಸೇತುವೆ ಮಾರ್ಗ 8–10 ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ. ಆಗ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರ ದೊರೆಯಬಹುದು. ಈ ಪ್ರದೇಶದಲ್ಲಿನ ಮನೆಗಳ ಮುಂದೆ ಮಾಲ್‌ಗೆ ಬರುವವರು ವಾಹನಗಳನ್ನು ನಿಲ್ಲಿಸುತ್ತಾರೆ ಎಂದು ಸ್ಥಳೀಯರು ದೂರಿದ್ದರು. ಆ ಸಮಸ್ಯೆಯೂ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ರಸ್ತೆಯಲ್ಲಿ ವಾಹನಗಳು ನಿಲ್ಲದಂತೆ ನೋಡಿಕೊಳ್ಳಬೇಕು. ಯಾರಾದರೂ ವಾಹನ ನಿಲ್ಲಿಸಿದರೆ, ಟೋಯಿಂಗ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಶಾಸಕ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ರಾಜಾಜಿನಗರ ರಸ್ತೆಯಲ್ಲಿ ಕೆಳಸೇತುವೆ ನಿರ್ಮಾಣ ಮತ್ತು ಕಸ್ತೂರಿ ನಗರದ ಮಾರ್ಗದಲ್ಲಿ ರಸ್ತೆ ದುರಸ್ತಿ ಮತ್ತು ಒಳಚರಂಡಿ ಮಾರ್ಗದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಓಕಳಿಪುರ ಕಡೆಯಿಂದ ಕುಷ್ಠರೋಗ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಹಲವು ತಿಂಗಳಿಂದ ಕೈಗೊಂಡಿರುವ ಕಾಮಗಾರಿಯಿಂದಾಗಿ ಇನ್ನೊಂದು ಪಥದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕಾಗಿದೆ. ಶನಿವಾರ ಮತ್ತು ಭಾನುವಾರದಂದು ಇಲ್ಲಿ ಕನಿಷ್ಠ ಒಂದು ಕಿಲೋ ಮೀಟರ್‌ ಉದ್ದ ವಾಹನಗಳು ನಿಲ್ಲುತ್ತವೆ. ವಿಳಂಬ ಕಾಮಗಾರಿಯಿಂದ ಅಪಘಾತಗಳು ಸಂಭವಿಸುತ್ತಿವೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.