ADVERTISEMENT

ರಶೀದಿ ಬಳಸಿ ಅಕ್ರಮವಾಗಿ ಸಂಚಾರ: ದಂಡ ವಿಧಿಸಿದರೂ ಸುತ್ತಾಟ

ಭಾರಿ ವಾಹನಗಳ ಓಡಾಟ ಯಥೇಚ್ಛ * ಪಾಲನೆಯಾಗದ ಆದೇಶ

ಸಂತೋಷ ಜಿಗಳಿಕೊಪ್ಪ
Published 25 ಮಾರ್ಚ್ 2022, 20:09 IST
Last Updated 25 ಮಾರ್ಚ್ 2022, 20:09 IST
ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಶುಕ್ರವಾರ ಸರಕು ತುಂಬಿದ್ದ ಲಾರಿಯೊಂದು ಸಂಚರಿಸಿತು - ಚಿತ್ರ: ರಂಜು ಪಿ
ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಶುಕ್ರವಾರ ಸರಕು ತುಂಬಿದ್ದ ಲಾರಿಯೊಂದು ಸಂಚರಿಸಿತು - ಚಿತ್ರ: ರಂಜು ಪಿ   

ಬೆಂಗಳೂರು: ನಗರದಲ್ಲಿ ನಿರ್ಬಂಧಿತ ಅವಧಿಯಲ್ಲಿ ಭಾರಿ ವಾಹನಗಳ ‘ಅಕ್ರಮ’ ಸಂಚಾರ ಮುಂದುವರಿದಿದ್ದು, ದಟ್ಟಣೆ ಅವಧಿಯಲ್ಲಿ (ಪೀಕ್ ಅವರ್) ಪ್ರಮುಖ ರಸ್ತೆಯಲ್ಲಿ ಸಂಚರಿಸಲು ಜನಸಾಮಾನ್ಯರು ಭಯಪಡುವಂತಾಗಿದೆ. ನಿತ್ಯವೂ ಆದೇಶ ಉಲ್ಲಂಘಿಸುತ್ತಿರುವ ಭಾರಿ ವಾಹನಗಳ ಚಾಲಕರು, ಸಂಚಾರ ಪೊಲೀಸರು ವಿಧಿಸುವ ದಂಡಕ್ಕೂ ಕ್ಯಾರೆ ಎನ್ನುತ್ತಿಲ್ಲ.

ಭಾರಿ ವಾಹನಗಳ ಕೆಲ ಚಾಲಕರ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಭಾರಿ ವಾಹನಗಳ ಸಂಚಾರಕ್ಕೆ ಅವಧಿ ನಿಗದಿಪಡಿಸಿ 2015ರಲ್ಲಿ ಆದೇಶ ಹೊರಡಿಸಿದ್ದು, ಇದರ ಪಾಲನೆ ಮಾತ್ರ ಆಗುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ.

ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ, ಸರ್ಜಾಪುರ ರಸ್ತೆ, ಕೋಲಾರ ರಸ್ತೆ ಹಾಗೂ ಇತರೆ ಗಡಿ ರಸ್ತೆಗಳ ಮೂಲಕ ಭಾರಿ ವಾಹನಗಳು ಬೆಂಗಳೂರು ಪ್ರವೇಶಿಸುತ್ತಿವೆ. ಜೊತೆಗೆ, ನಗರದಿಂದಲೂ ಗಡಿ ರಸ್ತೆಗಳ ಮೂಲಕ ವಾಹನಗಳು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಂಚರಿಸುತ್ತಿವೆ.

ADVERTISEMENT

ಕಟ್ಟಡ ನಿರ್ಮಾಣ ಸಾಮಗ್ರಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್, ಕೃಷಿ ಉತ್ಪನ್ನಗಳು, ವೈದ್ಯಕೀಯ ಸಲಕರಣೆಗಳು, ಹೊಸ ವಾಹನಗಳು, ಆಟೊಮೊಬೈಲ್ ಸಾಮಗ್ರಿಗಳು, ಬಟ್ಟೆ ಸೇರಿದಂತೆ ಎಲ್ಲ ಬಗೆಯ ವಸ್ತುಗಳನ್ನು ದೊಡ್ಡ ಗಾತ್ರದ ಭಾರಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ.

ನಗರದಲ್ಲಿ ದಟ್ಟಣೆ ಇರುವ ಸಂದರ್ಭದಲ್ಲಿ ಭಾರಿ ವಾಹನಗಳು ಬಂದರೆ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಭಾರಿ ವಾಹನಗಳ ಚಾಲಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅಪಘಾತಗಳು ಸಂಭವಿಸಿ, ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಾರೆ. ಇದನ್ನು ಮನಗಂಡಿದ್ದ ಹೈಕೋರ್ಟ್, ಭಾರಿ ವಾಹನಗಳ ಸಂಚಾರಕ್ಕೆ ನಿಯಮ ರೂಪಿಸುವಂತೆ ಸೂಚನೆ ನೀಡಿತ್ತು.

ಪೊಲೀಸ್ ಕಮಿಷನರ್ ಆಗಿದ್ದ ಎಂ.ಎನ್. ರೆಡ್ಡಿ ಅವರು 2014ರಲ್ಲಿ ನಿಯಮಾವಳಿ ರೂಪಿಸಿ ಭಾರಿ ವಾಹನಗಳ ಸಂಚಾರಕ್ಕೆ ಲಗಾಮು ವಿಧಿಸಿದ್ದರು. ವಾಹನಗಳ ಮಾಲೀಕರಿಂದ ದೂರುಗಳು ಬಂದಿದ್ದರಿಂದ, 2015ರಲ್ಲಿ ಕೆಲ ತಿದ್ದುಪಡಿ ಮೂಲಕ ಹೊಸ ಆದೇಶ ಜಾರಿಗೆ ತರಲಾಗಿದೆ. ಆದರೆ, ಇದರಲ್ಲಿರುವ ನಿಯಮಗಳನ್ನು ಯಾರೊಬ್ಬರೂ ಪಾಲಿಸುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.

ದಂಡ ಕಟ್ಟಿ ಸಂಚಾರ: ‘ಭಾರಿ ವಾಹನಗಳನ್ನು ಗಡಿಭಾಗದಲ್ಲಿ ತಪಾಸಣೆ ನಡೆಸುವ ಜವಾಬ್ದಾರಿಯನ್ನು ಆಯಾ ಸಂಚಾರ ಠಾಣೆ ಪೊಲೀಸರಿಗೆ ವಹಿಸ ಲಾಗಿದೆ. ಠಾಣೆ ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಎಲ್ಲ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾರೆ’ ಎಂದು ಸಂಚಾರ ವಿಭಾಗದ ಇನ್‌ಸ್ಪೆಕ್ಟರೊಬ್ಬರು ಹೇಳಿದರು.

‘2015ರ ಆದೇಶ ಉಲ್ಲಂಘಿಸುವ ಭಾರಿ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ಅಂಥ ವಾಹನಗಳನ್ನು ನಿರ್ಬಂಧಿತ ಅವಧಿ ಮುಗಿಯುವವರೆಗೂ ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಆದರೆ, ಕೆಲ ಚಾಲಕರು ತಪ್ಪಿಸಿಕೊಂಡು ನಗರದೊಳಗೆ ಪ್ರವೇಶಿಸುತ್ತಿದ್ದಾರೆ. ಮಾರ್ಗಮಧ್ಯೆ ಯಾರಾದರೂ ಪೊಲೀಸರು ತಡೆದರೆ, ದಂಡದ ರಶೀದಿ ತೋರಿಸಿ ಪಾರಾಗುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆದಿದೆ’ ಎಂದೂ ತಿಳಿಸಿದರು.

ತಪ್ಪೊಪ್ಪಿಗೆ ನೀಡಿ ದಂಡ ಪಾವತಿ: ‘ಕೆಲವೆಡೆ ಭಾರಿ ವಾಹನಗಳನ್ನು ಜಪ್ತಿ ಸಹ ಮಾಡಲಾಗಿದೆ. ಅದರ ಚಾಲಕರು ಹಾಗೂ ಮಾಲೀಕರು, ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡು ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಆ ಪೈಕಿ ಬಹುತೇಕರು, ಪದೇ ಪದೇ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುತ್ತಿದ್ದಾರೆ. ಅಂಥವರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ರೊಬ್ಬರು ಹೇಳಿದರು.

‘ಸಂಚಾರ ವಿಭಾಗದಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲ. ಗಣ್ಯ ವ್ಯಕ್ತಿಗಳ ಸಂಚಾರ, ಸಿಗ್ನಲ್ ಹಾಗೂ ಇತರೆ ಕೆಲಸಕ್ಕೂ ಸಿಬ್ಬಂದಿ ಸಾಲುವುದಿಲ್ಲ. ಮೋಟಾರು ವಾಹನಗಳ ಕಾಯ್ದೆ ಜಾರಿ ಜವಾಬ್ದಾರಿಯೂ ನಮ್ಮ ಮೇಲಿದೆ. ಹೀಗಾಗಿ, ಭಾರಿ ವಾಹನಗಳ ಸಂಚಾರದ ಮೇಲೆ ಹೆಚ್ಚು ನಿಗಾ ವಹಿಸಲು ಆಗುತ್ತಿಲ್ಲ’ ಎಂದೂ ಅವರು ತಿಳಿಸಿದರು.

ವಿಧಾನಸೌಧ ಸುತ್ತಮುತ್ತ ನಿರ್ಬಂಧ
ವಿಧಾನಸೌಧ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಮೂರೂವರೆ ಟನ್‌ಗಿಂತ ಹೆಚ್ಚು ಭಾರ ಹೊರುವ ಭಾರಿ ವಾಹನಗಳ ಸಂಚಾರವನ್ನು 24 ಗಂಟೆಯೂ ನಿರ್ಬಂಧಿಸಲಾಗಿದೆ. ಇಷ್ಟಾದರೂ ಕೆಲ ಚಾಲಕರು, ಭಾರಿ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ. ಅಂಥವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

‘ಹಣ ಕೊಟ್ಟು ಪಾರಾಗುವ ಚಾಲಕರು’
‘ಕೆಲ ಠಾಣೆಗಳ ಸಿಬ್ಬಂದಿ, ಭಾರಿ ವಾಹನಗಳ ಚಾಲಕರಿಂದ ಹಣ ಪಡೆದು ಬಿಟ್ಟು ಕಳುಹಿಸುತ್ತಿದ್ದಾರೆ. ಇಂಥ ಸಿಬ್ಬಂದಿಯಿಂದ ಇತರೆ ಪೊಲೀಸರಿಗೂ ಕೆಟ್ಟ ಹೆಸರು ಬರುತ್ತಿದೆ. ಚಾಲಕರೂ ನಿರ್ಬಂಧಿತ ಅವಧಿಯಲ್ಲಿ ರಾಜಾರೋಷವಾಗಿ ನಗರದಲ್ಲಿ ಸುತ್ತಾಡುತ್ತಿದ್ದಾರೆ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.