ADVERTISEMENT

ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌ನಲ್ಲಿ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:17 IST
Last Updated 29 ಡಿಸೆಂಬರ್ 2020, 21:17 IST
ಕಮಲ್ ಪಂತ್
ಕಮಲ್ ಪಂತ್    

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಈ ಬಾರಿಯ ಹೊಸ ವರ್ಷಾಚರಣೆಗೆ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ಹೇರಿದೆ. ಪ್ರತಿವರ್ಷ ಹೆಚ್ಚು ಜನ ಸೇರುತ್ತಿದ್ದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿ. 31ರಂದು ಸಂಜೆ 6 ಗಂಟೆಯಿಂದ ಜ. 1ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಂದು ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಕೆಲವೆಡೆ ಮಾರ್ಗ ಬದಲಾವಣೆ ಸಹ ಮಾಡಲಾಗಿದೆ.

‘ಹೊಸ ವರ್ಷಾಚರಣೆ ನೆಪದಲ್ಲಿ ಕೆಲವರು ವ್ಹೀಲಿಂಗ್, ಡ್ರ್ಯಾಗ್ ರೇಸ್ ಮಾಡುವ ಸಾಧ್ಯತೆ ಇದೆ. ಹೀಗಾಗಿ, ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತಿದೆ’ ಎಂದು ಆದೇಶದಲ್ಲಿ ಕಮಿಷನರ್ ತಿಳಿಸಿದ್ದಾರೆ.

ADVERTISEMENT

‘ಎಂ.ಜಿ. ರಸ್ತೆ (ಕ್ವೀನ್ಸ್ ವೃತ್ತದಿಂದ ಟ್ರಿನಿಟಿ ವೃತ್ತ), ಕಬ್ಬನ್ ರಸ್ತೆ, ರೆಸಿಡೆನ್ಸಿ, ರಿಚ್ಮಂಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ ಹಳೇ ಪಿ.ಎಸ್ ವೃತ್ತ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ಇಂದಿರಾ
ನಗರ 100 ಅಡಿ ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನೂ ನಿಷೇಧಿಸಲಾಗಿದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.