ADVERTISEMENT

ವಿಮಾನ ನಿಲ್ದಾಣಕ್ಕೆ ರೈಲು: ಯಶವಂತಪುರ ನಿರ್ಲಕ್ಷ್ಯ ಏಕೆ? -ಪ್ರಯಾಣಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:30 IST
Last Updated 5 ಆಗಸ್ಟ್ 2022, 21:30 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಳು ಹೊಸ ಮೆಮು ರೈಲುಗಳನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ. ಆದರೆ, ಯಶವಂತಪುರದಿಂದ ಒಂದೇ ಒಂದು ರೈಲು ಸಂಚರಿಸುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೋಲಾರಕ್ಕೆ ಹೋಗುವ ಡೆಮು ಎಕ್ಸ್‌ಪ್ರೆಸ್‌ ರೈಲು ಹೊರತಾಗಿ ಉಳಿದೆಲ್ಲಾ ರೈಲುಗಳು ಕಂಟೋನ್ಮೆಂಟ್‌, ಬೈಯಪ್ಪನಹಳ್ಳಿ, ದೊಡ್ಡಜಾಲ, ಯಲಹಂಕ ಮಾರ್ಗದಲ್ಲಿ ಸಂಚರಿಸಲಿವೆ.

ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಎರಡು ರೈಲುಗಳು ಹೊರಡಲಿದ್ದು, ಅವುಗಳು ಬೈಯಪ್ಪನಹಳ್ಳಿ ಮಾರ್ಗದಲ್ಲೇ ಸಂಚರಿಸುತ್ತವೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಹೊರಡುವ ಇನ್ನೆರಡು ರೈಲುಗಳೂ ಕಂಟೋನ್ಮೆಂಟ್‌–ಬೈಯಪ್ಪನಳ್ಳಿ ಮಾರ್ಗದಲ್ಲೇ ಸಂಚರಿಸಲಿವೆ.

ADVERTISEMENT

ಯಲಹಂಕದಿಂದ ಎರಡು ರೈಲು ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಲಿವೆ. ಏಳು ರೈಲುಗಳಲ್ಲಿ ಆರು ರೈಲುಗಳು ಯಶವಂತಪುರ ರೈಲು ನಿಲ್ದಾಣಕ್ಕೆ ಬಾರದೆ ಸಂಚರಿಸುತ್ತವೆ. ಹೊಸದಾಗಿ ರೈಲುಗಳ ಸಂಚಾರ ಆರಂಭಿಸಿರುವುದು ಸಂತಸದ ವಿಷಯ. ಆದರೆ, ಅವುಗಳು ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರ ಆಗಬೇಕೆಂದರೆ ಯಶವಂತಪುರ ಮಾರ್ಗದಲ್ಲಿ ತೆರಳುವುದು ಸೂಕ್ತ ಎಂಬುದು ರೈಲ್ವೆ ಹೋರಾಟಗಾರರ ಸಲಹೆ.

ಈ ಸಂಬಂಧ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯವಸ್ಥಾಪಕರಿಗೆ ‘ಸಿಟಿಜನ್ ಫಾರ್ ಸಿಟಿಜನ್’ ಸಂಘಟನೆ ಮನವಿ ಸಲ್ಲಿಸಿದೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಬೆಳಿಗ್ಗೆ 4.55ಕ್ಕೆ ಹೊರಡುವ ರೈಲು 6.10ಕ್ಕೆ ವಿಮಾನ ನಿಲ್ದಾಣ ತಲುಪಲಿದೆ. ಈ ರೈಲು ಕನಿಷ್ಠ 30 ನಿಮಿಷ ಮುಂಚಿತವಾಗಿ ಹೊರಟರೆ ವಿಮಾನ ನಿಲ್ದಾಣದಲ್ಲಿ ಪಾಳಿ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ ಎಂದು ಮನವಿಯಲ್ಲಿ ಸಂಘಟನೆಯ ಸಂಚಾಲಕ ರಾಜ್‌ಕುಮಾರ್ ದುಗಾರ್ ತಿಳಿಸಿದ್ದಾರೆ.

ಯಲಹಂಕದಿಂದ ಸಂಚಾರ ಆರಂಭಿಸಲು ಉದ್ದೇಶಿಸಿರುವ ಎರಡು ರೈಲುಗಳ ಸಂಚಾರವನ್ನು ಕೆಎಸ್‌ಆರ್ ರೈಲು ನಿಲ್ದಾಣದಿಂದ ಆರಂಭವಾಗುವಂತೆ ನೋಡಿ ಕೊಳ್ಳಬೇಕು. ಅಲ್ಲದೇ ಅವುಗಳು ಯಶ ವಂತಪುರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಬೇಕು. ಇದರಿಂದ ಆ ಭಾಗದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಕೆಎಸ್‌ಆರ್ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಬೆಂಗಳೂರು–ಕೋಲಾರ ಡೆಮು ಎಕ್ಸ್‌ಪ್ರೆಸ್‌ ರೈಲು ಸೇರಿ ಎಲ್ಲಾ ರೈಲುಗಳೂ ವಿಮಾನ ನಿಲ್ದಾಣದ ಬಳಿ ಇರುವ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.

‘ತುಮಕೂರು, ಮೈಸೂರು, ಹೊಸೂರು, ಬಂಗಾರಪೇಟೆ ಸೇರಿ ಸುತ್ತಮುತ್ತಲ ನಗರಗಳಿಂದ ವಿಮಾನ ನಿಲ್ದಾಣ ತಲುಪಲು ಅನುಕೂಲ ಆಗುವಂತೆ ರೈಲಿನ ವ್ಯವಸ್ಥೆ ಮಾಡಬೇಕು. ಯಲಹಂಕ–ದೇವನಹಳ್ಳಿ ನಡುವೆ ಜೋಡಿ ಮಾರ್ಗವನ್ನು ಕೂಡಲೇ ಮಾಡ ಬೇಕು’ ಎಂದು ಮನವಿ ಮಾಡಿದ್ದಾರೆ.

‘ಯಲಹಂಕದಿಂದ ಕಾರ್ಯಾಚರಣೆ ಅಗತ್ಯವಿಲ್ಲ’

‘ಸಂಚಾರ ದಟ್ಟಣೆ ನಡುವೆ ಬಸ್ ಅಥವಾ ಇತರೆ ವಾಹನಗಳಲ್ಲಿ ಯಲಹಂಕ ತಲುಪುವುದೇ ಕಷ್ಟ. ಯಲಹಂಕ–ವಿಮಾನ ನಿಲ್ದಾಣಕ್ಕೆ ರೈಲು ಸಂಚರಿಸಿದರೆ ಯಾರಿಗೂ ಅನುಕೂಲ ಇಲ್ಲ’ ಎಂದು ರೈಲ್ವೆ ಹೋರಾಟಗಾರೆ ಕೃಷ್ಣಪ್ರಸಾದ್ ಹೇಳಿದರು.

‘ಯಶವಂತಪುರಕ್ಕೆ ಮೆಟ್ರೊ ರೈಲಿನ ಸಂಪರ್ಕ ಇದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲುಗಳು ಸಂಚರಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗಿದೆ. ಅದನ್ನು ಬಿಟ್ಟು ಯಲಹಂಕದಿಂದ ಪ್ರಯಾಣ ಆರಂಭಿಸಿದರೆ ಏನು ಲಾಭ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.