ADVERTISEMENT

ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ: ಬೆಸ್ಕಾಂಗೆ ಹೈಕೋರ್ಟ್ ಚಾಟಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 15:57 IST
Last Updated 23 ಡಿಸೆಂಬರ್ 2021, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ನಗರದ ಪಾದಚಾರಿ ಮಾರ್ಗಗಳಲ್ಲಿರುವ ಟ್ರಾನ್ಸಫಾರ್ಮರ್‌ಗಳನ್ನುಯಾವ ನಿಯಮಗಳ ಆಧಾರದಲ್ಲಿ ಅಳವಡಿಸಿದ್ದೀರಿ’ ಎಂದು ಬೆಸ್ಕಾಂ ಅನ್ನು ಖಾರವಾಗಿ ಪ್ರಶ್ನಿಸಿರುವ ಹೈಕೋರ್ಟ್‌, ‘ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸಫಾರ್ಮರ್‌ಗಳನ್ನು ಅಳವಡಿಸಿದ್ದೇ ತಪ್ಪು. ಈಗ ನೋಡಿದರೆ ಅವುಗಳ ಸ್ಥಳಾಂತರಕ್ಕೆ ಇನ್ನೊಂದು ವರ್ಷ ಬೇಕು ಎನ್ನುತ್ತಿದ್ದೀರಿ, ಹೀಗೇ ಹೇಳುತ್ತಾ ಹೋದರೆ ನೀವು ಅದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

‘ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಅಂಚಿನಲ್ಲಿರುವ ಅಪಾಯಕಾರಿ ಟ್ರಾನ್ಸಫಾರ್ಮರ್‌ಗಳ ತೆರವಿಗೆ ನಿರ್ದೇಶಿಸಬೇಕು’ ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲಾಗಿದೆಯೇ’ ಎಂದುಬೆಸ್ಕಾಂ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, ‘ಸ್ಥಳಾಂತರಿಸಬೇಕಾದ ಟ್ರಾನ್ಸಫಾರ್ಮರ್‌ಗಳನ್ನು ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ಉನ್ನತ ಸಮಿತಿಯು ಈಗಾಗಲೇ ಗುರುತಿಸಿದೆ. ಟೆಂಡರ್ ಪೂರ್ಣಗೊಳಿಸಿ ಏಜೆನ್ಸಿಗಳಿಗೆ ಕಾರ್ಯಾದೇಶ ನೀಡಲಾಗುವುದು’ ಎಂದರು.

ADVERTISEMENT

ಇದಕ್ಕೆ ತೃಪ್ತವಾಗದ ನ್ಯಾಯಪೀಠ, ‘ನಿಮ್ಮ ಟೆಂಡರ್, ಕಾರ್ಯಾದೇಶದ ಸಂಗತಿಗಳೆಲ್ಲಾ ನಮಗೆ ಬೇಕಿಲ್ಲ. ಟ್ರಾನ್ಸಫಾರ್ಮರ್‌ಗಳನ್ನು ತೆರವು ಮಾಡಲಾಗಿದೆಯೊ ಇಲ್ಲವೊ ಎಂಬುದಷ್ಟೇ ಮುಖ್ಯ.ಎಷ್ಟು ದಿನಗಳಲ್ಲಿ, ಹೇಗೆ ಸ್ಥಳಾಂತರ ಮಾಡುತ್ತೀರಿ ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.