ADVERTISEMENT

ಎಂಟು ಕಡೆ ಸಂಪರ್ಕ ಹಬ್‌ಗೆ ವಿನ್ಯಾಸ

ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಟೆಂಡರ್ ಆಹ್ವಾನ l ಸಂಚಾರ ದಟ್ಟಣೆ ತಗ್ಗಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 23:32 IST
Last Updated 15 ನವೆಂಬರ್ 2019, 23:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ 8 ಕಡೆ ಅಂತರ ಸಂಪರ್ಕ ಸಾರಿಗೆ ಹಬ್‌ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲುನಗರ ಭೂ ಸಾರಿಗೆ ನಿರ್ದೇಶನಾಲಯ ಟೆಂಡರ್ ಆಹ್ವಾನಿಸಿದೆ.

ಎರಡು ‌ಪ್ಯಾಕೇಜ್‌ಗಳಲ್ಲಿ ವಿನ್ಯಾಸ ರೂಪಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಚಲ್ಲಘಟ್ಟ, ಬೈಯ್ಯಪ್ಪನಹಳ್ಳಿ, ಕೆ.ಆರ್. ಪುರ, ಪೀಣ್ಯ, ಬೊಮ್ಮಸಂದ್ರ ಹಾಗೂ 2ನೇ ಪ್ಯಾಕೇಜ್‌ನಲ್ಲಿ ಹಳೆ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ, ಕಾಡುಗೋಡಿಯಲ್ಲಿ ಹಬ್ ನಿರ್ಮಿಸಲು ವಿನ್ಯಾಸ ರೂಪಿಸಲು ಯೋಜಿಸಿದೆ.

4 ವರ್ಷಗಳಲ್ಲಿ ಎಲ್ಲಾ ಹಬ್‌ಗಳ ವಿನ್ಯಾಸ ಪೂರ್ಣಗೊಳಿಸಲು ಗಡುವು ನಿಗದಿ ಮಾಡಿ ಟೆಂಡರ್ ಆಹ್ವಾನಿಸಲಾಗಿದೆ. 2020ರ ಜನವರಿಯಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ.

ADVERTISEMENT

ಸಂಚಾರ ದಟ್ಟಣೆ ಅತೀ ಹೆಚ್ಚಾಗಿರುವ ಪೂರ್ವ ದಿಕ್ಕಿನಲ್ಲೇ ನಾಲ್ಕು ಹಬ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಉತ್ತರ, ವಾಯವ್ಯ, ಪಶ್ಚಿಮ ಮತ್ತು ದಕ್ಷಿಣದಲ್ಲಿ ತಲಾ ಒಂದೊಂದು ಹಬ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಈ ಹಬ್‌ಗಳಲ್ಲಿ ಮೆಟ್ರೊ ರೈಲು, ಬಿಎಂಟಿಸಿ ಮತ್ತು ಸಬ್‌ ಅರ್ಬನ್ ರೈಲು ಸೇವೆಗಳನ್ನು ಒಂದೆಡೆಯೇ ದೊರಕಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಈ ಸಾರಿಗೆ ಹಬ್‌ಗಳ ಮೂಲಕ ಮೆಟ್ರೊ ರೈಲು, ಉಪನಗರ ರೈಲು ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ನಗರದೊಳಗೆ ಸಂಚರಿಸಲು ಅನುಕೂಲವಾಗಲಿದೆ. ಈ ಹಬ್‌ಗಳಲ್ಲಿ ವಿಶ್ರಾಂತಿ ಕೊಠಡಿ, ಸ್ನಾನದ ಸೌಲಭ್ಯ ಒಳಗೊಂಡ ಶೌಚಾಲಯ, ತಂಗುವ ಕೊಠಡಿ, ಲಗೇಜ್ ಕೊಠಡಿ, ಆಹಾರ ಮಳಿಗೆ, ಶಾಪಿಂಗ್ ಮಳಿಗೆಗಳಿಗೂ ಅವಕಾಶ ದೊರೆಯಲಿದೆ.

ಎಲ್ಲೆಲ್ಲಿ ಸಾರಿಗೆ ಹಬ್‌

* ಪಶ್ಚಿಮ: ಚಲ್ಲಘಟ್ಟ, ಮೈಸೂರು ರಸ್ತೆ
* ಪೂರ್ವ-1: ಬೈಯ್ಯಪ್ಪನಹಳ್ಳಿ, ಮೆಟ್ರೊ ನಿಲ್ದಾಣ ಬಳಿ
* ಪೂರ್ವ 2: ಕೆ.ಆರ್.ಪುರ
* ವಾಯವ್ಯ: ಪೀಣ್ಯ ಬಿಎಂಟಿಸಿ ಟರ್ಮಿನಲ್ ಬಳಿ
* ದಕ್ಷಿಣ: ಬೊಮ್ಮಸಂದ್ರ ಮೆಟ್ರೊ ನಿಲ್ದಾಣ ಬಳಿ
* ಪೂರ್ವ: 3 ಹಳೆ ಮದ್ರಾಸ್ ರಸ್ತೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಜಂಕ್ಷನ್ (ಸ್ಥಳ ಅಂತಿಮಗೊಳ್ಳಬೇಕಿದೆ)
* ಉತ್ತರ: ಬಳ್ಳಾರಿ ರಸ್ತೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಜಂಕ್ಷನ್ (ಸ್ಥಳ ಅಂತಿಮಗೊಳ್ಳಬೇಕಿದೆ)
* ಪೂರ್ವ-4: ಕಾಡುಗೋಡಿ (ಸ್ಥಳ ಅಂತಿಮಗೊಳ್ಳಬೇಕಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.