ಕೆ.ಆರ್.ಪುರ: ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ ಮತ್ತು ಮಿಡಿತ ಫೌಂಡೇಶನ್ ಸಹಯೋಗದಲ್ಲಿ ಚನ್ನಸಂದ್ರದ ಎ.ಕೆ.ಗೋಪಾಲ್ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ‘ಮಗುವಿಗೊಂದು ಗಿಡ ಶಾಲೆಗೊಂದು ವನ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಸ್ವಯಂ ಸೇವಕರೊಂದಿಗೆ ಸೇರಿ ಮಕ್ಕಳು 501 ಗಿಡಗಳನ್ನು ನೆಟ್ಟು ಮುಂದಿನ ದಿನಗಳಲ್ಲಿ ಪೋಷಿಸುವ ಪ್ರತಿಜ್ಞೆ ಮಾಡಿದರು.
ಬಿಜೆಪಿ ರಾಜ್ಯ ಪರಿಷತ್ತು ಸದಸ್ಯ ಎಲ್.ರಾಜೇಶ್ ಮಾತನಾಡಿ, ‘ಒಂದು ಮರ ವರ್ಷಕ್ಕೆ 150 ಕೆಜಿಗೂ ಹೆಚ್ಚು ಆಮ್ಲಜನಕ ನೀಡುತ್ತದೆ. ಇದೆ ರೀತಿ ಒಂದು ಬೈಕ್ ಅಥವಾ ಕಾರ್ ವರ್ಷಕ್ಕೆ 250 ಕೆಜಿಗೂ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಹೋರಬಿಡುತ್ತದೆ. ಅದ್ದರಿಂದ ಗಿಡ ನೆಡುವ ಮೂಲಕ ಪ್ರಕೃತಿಗೆ ಒಳ್ಳೆಯದು ಮಾಡಬೇಕು, ಇಲ್ಲದಿದ್ದರೆ ಪ್ರಕೃತಿ ವಿಕೋಪ ಆಗುತ್ತದೆ’ ಎಂದರು.
ಮಿಡಿತ ಫೌಂಡೇಶನ್ ಅಧ್ಯಕ್ಷ ಪರಿಸರ ಮಂಜುನಾಥ್ ಮಾತನಾಡಿ, ‘ಒಂದು ಎಕರೆ ಖಾಲಿ ಜಾಗದಲ್ಲಿ 501 ಗಿಡಗಳನ್ನು ಮಕ್ಕಳೊಂದಿಗೆ ನೆಡಲಾಗಿದೆ. ಅರಳಿ, ಆಲದ, ಬೇವು, ಮಾವು, ಸಂಪಿಗೆ, ಪಾರಂಪರಿಕ ಗಿಡಗಳಾದ ಮರಗಲು, ಹೊಂಗೆ, ಕಾಡುಮಲ್ಲಿಗೆ, ತೊರೆಮತ್ತಿ, ಕದಂಬ, ನೇರಳೆ, ಸೀಬೆ, ಗಸೆಗಸೆ, ಬಾದಾಮಿ ಗಿಡಗಳನ್ನು ನೆಡಲಾಗಿದೆ’ ಎಂದರು.
ಮಹದೇವಪುರ ಟಾಸ್ಕ್ ಫೋರ್ಸ್ ಅರೋಗ್ಯ ಮತ್ತು ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗುಟ್ಟ ಮಾರಪ್ಪ, ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ ಅಧ್ಯಕ್ಷೆ ಭಾಗ್ಯ, ಭೀಮ್ ಪ್ರಜಾಸಂಘದ ಅಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್, ಮುಖ್ಯ ಶಿಕ್ಷಕಿ ಪ್ರೇಮಾಕುಮಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.