
ಬೆಂಗಳೂರು: ‘ಸುರಂಗ ರಸ್ತೆ ಯೋಜನೆ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯವರು ಅಡಚಣೆ ಮಾಡುತ್ತಿದ್ದಾರೆ. ಯಾರು ಏನೇ ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನದಲ್ಲಿ ಸುದ್ದಿಗಾರರೊಂದಿಗೆ ಅವರು ಶನಿವಾರ ಮಾತನಾಡಿದರು.
‘ಸುರಂಗ ರಸ್ತೆ ಯೋಜನೆಗೆ ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಒಂದು ಸಣ್ಣ ಭಾಗದಲ್ಲಿ ರಸ್ತೆ ಹಾದುಹೋಗುತ್ತದೆ. ಇದನ್ನು ಪರಿಶೀಲನೆ ಮಾಡುತ್ತೇನೆ. ಲಾಲ್‌ಬಾಗ್‌ಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಸ್ವಲ್ಪ ಜಾಗವನ್ನು ಈ ಯೋಜನೆ ಕಾಮಗಾರಿ ನಡೆಯುವವರೆಗೂ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ, ಲಾಲ್‌ಬಾಗ್ ಉದ್ಯಾನಕ್ಕೆ ಹಿಂತಿರುಗಿಸುತ್ತೇವೆ’ ಎಂದು ತಿಳಿಸಿದರು.
‘ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಮುಂಬೈ, ದೆಹಲಿಯಲ್ಲಿ ಏಕೆ ಭೂಮಿ ಕೊರೆದು ಸುರಂಗ ರಸ್ತೆ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ನಾನು ಆತನ ಮಾತಿಗೆ ಬಾಗುವುದಿಲ್ಲ. ಹೋರಾಟ ಮಾಡುವವರು ಮಾಡುತ್ತಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ಒದಗಿಸಿದ್ದರೂ ಅನೇಕರು ಸಂಪರ್ಕ ಪಡೆದಿಲ್ಲ. ಈ ಭಾಗದ ಜನರು ಸಂಪರ್ಕ ತೆಗೆದುಕೊಳ್ಳಿ. ಸಂಪರ್ಕಕ್ಕೆ ಕಂತುಗಳಲ್ಲಿ ಹಣ ಪಾವತಿಗೂ ಅವಕಾಶ ಕಲ್ಪಿಸಿದ್ದೇವೆ’ ಎಂದರು.
ಶಾಸಕ ಎಸ್.ಟಿ. ಸೋಮಶೇಖರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ, ಹೆಚ್ಚುವರಿ ಆಯುಕ್ತ ದಿಗ್ವಿಜಯ್ ಬೋಡ್ಕೆ ಹಾಜರಿದ್ದರು.
ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವುದಕ್ಕೇ ಒಂದು ತಂಡವಿದೆ. ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚುಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೇರೋಹಳ್ಳಿಯ ಭರತ್ ನಗರದ ಗಾಂಧಿ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ನಡಿಗೆ ಅಭಿಯಾನ’ದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ನೂರಕ್ಕೂ ಹೆಚ್ಚು ಮಂದಿ ಅಹವಾಲು ಸಲ್ಲಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಡಾವಣೆಗಳ ಬವಣೆಗಳನ್ನು ಜನ ಹೇಳಿಕೊಂಡರು. ಬಡಾವಣೆ ಸಂಘಗಳ ಪ್ರತಿನಿಧಿಗಳೂ ಭಾಗಿಯಾಗಿದ್ದರು.
ರಸ್ತೆ ಅವ್ಯವಸ್ಥೆ, ದೊಡ್ಡ ಮೋರಿಗಳು, ಕುಡಿಯುವ ನೀರು, ಉದ್ಯಾನಗಳ ಸ್ಥಿತಿ, ಬಿಎಂಟಿಸಿ ಬಸ್ ಸಂಚಾರ ಸುಧಾರಣೆ, ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ, ಚಿತಾಗಾರದ ಸಮಸ್ಯೆ, ಬಿಡಿಎ ಫ್ಲ್ಯಾಟ್‌ಗಳ ಹಸ್ತಾಂತರ, ಕೆರೆಗಳ ಅಭಿವೃದ್ದಿ, ಜಿಂಕೆ ಉದ್ಯಾನ ನಿರ್ಮಾಣ, ಕ್ರೀಡಾಂಗಣ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.
ಬೀದಿ ವ್ಯಾಪಾರಿಗಳಿಂದ ಮುಖ್ಯ ರಸ್ತೆಗಳು ಒತ್ತುವರಿಯಾಗಿ ಸುಗಮ ಸಂಚಾರಕ್ಕೆ ಅವಕಾಶ ಇಲ್ಲದಾಗಿದೆ. ಕೆಲವು ಭಾಗಗಳಲ್ಲಿ ಸಂಚಾರ ದಟ್ಟಣೆಯೂ ಅಧಿಕವಾಗಿದೆ. ಇವುಗಳಿಗೂ ಪರಿಹಾರ ನೀಡಿ ಎಂದು ಕೆಲವರು ಮನವಿ ಮಾಡಿದರು.
ಒಂದು ಗಂಟೆಗೂ ಹೆಚ್ಚು ಕಾಲ ಸಮಸ್ಯೆಗಳನ್ನು ಆಲಿಸಿದ ಬಳಿಕ ಉತ್ತರಿಸಿದ ಡಿ.ಕೆ. ಶಿವಕುಮಾರ್, ‘ಕಸ ಸಮಸ್ಯೆ, ರಸ್ತೆ, ಪಾರ್ಕ್, ಜಿಮ್, ಶೌಚಾಲಯ, ಪೊಲೀಸ್ ವಿಚಾರ, ಎಲ್‌ಇಡಿ ದೀಪ, ಬಸ್ ನಿಲ್ದಾಣ, ರಸ್ತೆ ವಿಸ್ತರಣೆ, ಮೆಟ್ರೊ, ಕಲುಷಿತ ನೀರು, ಪಾರ್ಕ್ ಒತ್ತುವರಿ, ನೀರಿನ ಸಂಪರ್ಕ, ಬಿಡಿಎ ಅಧಿಸೂಚನೆ, ಕ್ಲಬ್, ಕೌಶಲ ಅಭಿವೃದ್ಧಿ ಕೇಂದ್ರ, ಆಸ್ಪತ್ರೆ ವಿಚಾರವಾಗಿ ಪ್ರಸ್ತಾಪ ಮಾಡಿದ್ದೀರಿ. ಕಾಲಮಿತಿ ಒಳಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.
‘ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ಒದಗಿಸಿದ್ದರೂ ಅನೇಕರು ಸಂಪರ್ಕ ಪಡೆದಿಲ್ಲ. ಈ ಭಾಗದ ಜನರು ಸಂಪರ್ಕ ತೆಗೆದುಕೊಳ್ಳಿ. ಸಂಪರ್ಕಕ್ಕೆ ಕಂತುಗಳಲ್ಲಿ ಹಣ ಪಾವತಿಗೂ ಅವಕಾಶ ಕಲ್ಪಿಸಿದ್ದೇವೆ’ ಎಂದರು.
ಶಾಸಕ ಎಸ್.ಟಿ. ಸೋಮಶೇಖರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ, ಹೆಚ್ಚುವರಿ ಆಯುಕ್ತ ದಿಗ್ವಿಜಯ್ ಬೋಡ್ಕೆ ಹಾಜರಿದ್ದರು.
ಬಿಜೆಪಿ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಸಮಸ್ಯೆ ಬಗೆಹರಿಸಲಿಲ್ಲ ಏಕೆ?
ಅವರ ಕಾಲದಲ್ಲಿ ಕಸದ ಟೆಂಡರ್ ಕರೆಯಲು
ಸಾಧ್ಯವಾಗಲಿಲ್ಲ ಏಕೆ?
ರಸ್ತೆ ವಿಸ್ತರಣೆ, ಮೇಲ್ಸೇತುವೆ ಏಕೆ ಮಾಡಲಿಲ್ಲ? ಅವರು ಬೆಂಗಳೂರಿಗಾಗಿ ಏನೂ ಮಾಡಲಿಲ್ಲ.
ಬೆಂಗಳೂರಿನ ಬೀದಿಗಳಲ್ಲಿ ನೇತಾಡುತ್ತಿರುವ ಕೇಬಲ್ ವೈಯರ್‌ಗಳನ್ನು ಏಕೆ ತೆರವುಗೊಳಿಸಲಿಲ್ಲ? ಮಾಫಿಯಾ ಜೊತೆ ಕೈಜೋಡಿಸಿ, ಬೆಂಗಳೂರನ್ನು ಹದಗೆಡಿಸಿದ್ದಾರೆ.
‘ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಬೆಂಗಳೂರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ. ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್’ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ಸುರಂಗ ರಸ್ತೆಗೆ ಸಂಸದ ತೇಜಸ್ವಿ ಸೂರ್ಯ ಅವರ ವಿರೋಧದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಯಾರೂ ಏನಾದರೂ ವಿರೋಧ ಮಾಡಿಕೊಳ್ಳಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡಿ ಹೆಸರು ಮಾಡಬಾರದು ಎಂಬುದು ಅವರ ಉದ್ದೇಶ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.