ADVERTISEMENT

ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್: ರಜತ್, ವಿನಯ್‌ಗೆ ನ್ಯಾಯಾಂಗ ಬಂಧನ

ರೀಲ್ಸ್‌ನಲ್ಲಿ ಬಳಸಿದ್ದಕ್ಕೂ, ಜಪ್ತಿಯಾದ ಮಚ್ಚಿಗೂ ವ್ಯತ್ಯಾಸ? l ಇಂದು ನ್ಯಾಯಾಲಯಕ್ಕೆ ಹಾಜರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 0:30 IST
Last Updated 26 ಮಾರ್ಚ್ 2025, 0:30 IST
<div class="paragraphs"><p>ಪೊಲೀಸ್ ವಶದಲ್ಲಿ ವಿನಯ್‌ಗೌಡ ಹಾಗೂ ರಜತ್‌ ಕಿಶನ್‌&nbsp;</p></div>

ಪೊಲೀಸ್ ವಶದಲ್ಲಿ ವಿನಯ್‌ಗೌಡ ಹಾಗೂ ರಜತ್‌ ಕಿಶನ್‌ 

   
ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡಿದ್ದ ಪ್ರಕರಣ ರಜತ್, ವಿನಯ್‌ಗೆ ನ್ಯಾಯಾಂಗ ಬಂಧನ

ಬೆಂಗಳೂರು: ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್‌ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಿರುತೆರೆ ನಟರಾದ ರಜತ್‌ ಕಿಶನ್‌ ಹಾಗೂ ವಿನಯ್‌ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಮಂಗಳವಾರ ತಡರಾತ್ರಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ‌ ನೀಡುವಂತೆ ಪೊಲೀಸರು ಮನವಿ‌ ಮಾಡಿದರು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.‌
ಇದಕ್ಕೂ ಮೊದಲು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ADVERTISEMENT


ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಹೆಸರಿನ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಬಸವೇಶ್ವರನಗರ ಠಾಣೆಯ ಪೊಲೀಸರು, ಸೋಮವಾರ ಸಂಜೆ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದರು.

ರೀಲ್ಸ್‌ಗೆ ಬಳಸಿದ್ದು ಫೈಬರ್‌ನಿಂದ ತಯಾರಿಸಿದ್ದ ಮಚ್ಚಿನ ಮಾದರಿ ಎಂಬುದಾಗಿ ಆರೋಪಿಗಳು ಹೇಳಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದರು. ಅದಾದ ಮೇಲೆ ಇಬ್ಬರನ್ನೂ ಸೋಮವಾರ ಮಧ್ಯ
ರಾತ್ರಿಯೇ ಠಾಣೆಯಿಂದ ಬಿಡುಗಡೆ ಮಾಡಲಾಗಿತ್ತು.

‘ರೀಲ್ಸ್‌ನಲ್ಲಿ ಆರೋಪಿಗಳು ಬಳಸಿರುವ ಮಚ್ಚಿಗೂ, ಅವರು ನಮಗೆ ಒಪ್ಪಿಸಿರುವ ಮಚ್ಚಿಗೂ ವ್ಯತ್ಯಾಸ ಕಂಡು
ಬಂದಿದೆ. ಹೀಗಾಗಿ, ಇಬ್ಬರಿಗೂ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ವಿಚಾರಣೆಗೆ ಬಂದಾಗ ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು. ಸ್ಥಳ ಮಹಜರು ಸಹ ನಡೆಸಲಾಗಿದೆ' ಪೊಲೀಸ್ ಮೂಲಗಳು ತಿಳಿಸಿವೆ.

ಸಾಕ್ಷ್ಯ ನಾಶದ ಆರೋಪ: ಆರೋಪಿಗಳು ಸಾಕ್ಷ್ಯ ನಾಶ ಪಡಿಸಿದ ಆರೋಪವಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ವ್ಯತ್ಯಾಸ ಪತ್ತೆ?: ಮಚ್ಚುಗಳ ನಡುವಿನ ವ್ಯತ್ಯಾಸದ ಪತ್ತೆಗಾಗಿ ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ಜಪ್ತಿ ಮಾಡಿಕೊಂಡ ಮಚ್ಚಿನ ಮಾದರಿಯಲ್ಲಿ ಹೊಳಪಿನ ಕೋಟಿಂಗ್ ಇದೆ. ಆರೋಪಿಗಳು ರೀಲ್ಸ್‌ನಲ್ಲಿ ಹಿಡಿದುಕೊಂಡಿರುವ ಮಚ್ಚಿನಲ್ಲಿ ತುಕ್ಕು ಹಿಡಿದಿರುವಂತೆ ಕಾಣಿಸುತ್ತಿದೆ ಎಂದು ಮೂಲಗಳು ಹೇಳಿವೆ.

'ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋಗಾಗಿ ರೀಲ್ಸ್ ಮಾಡಿದ್ದೆವು. ನಾಗರಬಾವಿಯ ಅಕ್ಷಯ ಸ್ಟೂಡಿಯೊದ ಎದುರು ರೀಲ್ಸ್‌ ಮಾಡಿದ್ದೆವು. ಕಾರ್ಯಕ್ರಮದಲ್ಲಿ ಪುಷ್ಪ ಹಾಗೂ ದರ್ಶನ್
ಪಾತ್ರದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದೆವು. ಕಾರ್ಯಕ್ರಮದ ಪ್ರಚಾರಕ್ಕಾಗಿ ಫೈಬರ್‌ನ ಮಚ್ಚಿನ ಮಾದರಿಯನ್ನು ಹಿಡಿದುಕೊಂಡು ರೀಲ್ಸ್‌ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಾರ್ಯಕ್ರಮದ ಪ್ರೊಮೊವನ್ನು ತೋರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಎಫ್‌ಎಸ್‌ಎಲ್‌ಗೆ ರವಾನೆ

ಆರೋಪಿಗಳು ನೀಡಿರುವ ಮಚ್ಚಿನ ಮಾದರಿ ಹಾಗೂ ವಿಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದೆ. ಅವರು ವಿಡಿಯೊವನ್ನು ಪರಿಶೀಲಿಸಿ ವರದಿ ನೀಡಲಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ ತಿಳಿಸಿದರು.

ಸ್ಥಳ ಮಹಜರು

ಈ ಬೆಳವಣಿಗೆಯ ಬಳಿಕ ಇಬ್ಬರು ಆರೋಪಿಗಳನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು, ನಾಗರಬಾವಿಯ ಅಭಯ್ ಸ್ಟೂಡಿಯೊ ಬಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿದ್ದ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.