
ಬೆಂಗಳೂರು: ಕಿರುತೆರೆ ನಟಿಗೆ ಅಶ್ಲೀಲ ಸಂದೇಶ ಹಾಗೂ ಚಿತ್ರ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಟೆಂಪಲ್ಟನ್ ಆ್ಯಂಡ್ ಪಾರ್ಟನರ್ ಎಂಬ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ನವೀನ್ ಕೆ. ಮಾನ್ ಬಂಧಿತ ಆರೋಪಿ. ಕೇರಳದ ನವೀನ್, ವೈಟ್‌ಫೀಲ್ಡ್‌ನಲ್ಲಿ ಇರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ನಟಿಗೆ ನಿರಂತರವಾಗಿ ಅಶ್ಲೀಲ ಫೋಟೊ, ವಿಡಿಯೊಗಳನ್ನು ಕಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 75(1)(iii), 78(1)(ii), 79ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮೂರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಆರೋಪಿ ‘ಫ್ರೆಂಡ್ ರಿಕ್ವೆಸ್ಟ್’ ಕಳಿಸಿದ್ದ. ರಿಕ್ವೆಸ್ಟ್ ಅನ್ನು ನಟಿ ಸ್ವೀಕರಿಸಿರಲಿಲ್ಲ. ಅಂದಿನಿಂದ ದೂರುದಾರೆಗೆ ನಿತ್ಯವೂ ಮೆಸೆಂಜರ್ ಮೂಲಕ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ಕಳುಹಿಸಲು ಆರಂಭಿಸಿದ್ದ. ಬಳಿಕ ಆರೋಪಿಯ ಪ್ರೊಫೈಲ್ ಬ್ಲಾಕ್ ಮಾಡಿದ್ದರು. ಅದಾದ ನಂತರವೂ ಬೇರೆ ಬೇರೆ ಪ್ರೊಫೈಲ್ ಮೂಲಕ ದೂರುದಾರೆಗೆ ಆರೋಪಿ ಅಶ್ಲೀಲ ಸಂದೇಶ ಹಾಗೂ ವಿಡಿಯೊಗಳನ್ನು ಕಳುಹಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಬುದ್ಧಿಮಾತು ಹೇಳಿದ್ದ ನಟಿ: ನವೆಂಬರ್ 1ರಂದು ನಾಗರಭಾವಿ ಎರಡನೇ ಹಂತದಲ್ಲಿರುವ ಹೋಟೆಲ್‌ವೊಂದಲ್ಲಿ ಆರೋಪಿಯನ್ನು ನೇರವಾಗಿ ಭೇಟಿ ಮಾಡಿದ್ದ ನಟಿ ಬುದ್ಧಿಮಾತು ಹೇಳಿದ್ದರು. ಇದೇ ವರ್ತನೆ ಮುಂದುವರಿಸಿದರೆ ದೂರು ನೀಡಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದರು. ಆರೋಪಿ ಮತ್ತೆ ಅದೇ ವರ್ತನೆ ತೋರಿದ್ದರಿಂದ ದೂರು ನೀಡಲಾಯಿತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.