ADVERTISEMENT

₹3.30 ಕೋಟಿ ಮೌಲ್ಯದ ಡ್ರಗ್ಸ್ ವಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 21:02 IST
Last Updated 23 ಸೆಪ್ಟೆಂಬರ್ 2020, 21:02 IST
ವಶಕ್ಕೆ ಪಡೆದಿರುವ ಮಾದಕ ವಸ್ತುಗಳು
ವಶಕ್ಕೆ ಪಡೆದಿರುವ ಮಾದಕ ವಸ್ತುಗಳು   

ಬೆಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತು ಅಫೀಮು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಇಬ್ಬರನ್ನು ಸಿಟಿ ಮಾರುಕಟ್ಟೆ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹3.30 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಗಡಿ ರಸ್ತೆಯಲ್ಲಿ ವಾಸವಿದ್ದ ರಾಜುರಾಮ್ ಬಿಷ್ಣೋಯ್ (31) ಹಾಗೂ ಕುಂಬಳಗೋಡಿನ ನಿವಾಸಿ ಸುನಿಲ್ ಕುಮಾರ್ (21) ಬಂಧಿತರು.

ಸಿಟಿ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಮೆಟ್ರೊ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಆರೋಪಿಗಳು ಅಫೀಮು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ತನಿಖೆ ವೇಳೆ ಆರೋಪಿಗಳ ಮನೆಯಲ್ಲಿ ₹3.30 ಕೋಟಿ ಬೆಲೆಬಾಳುವ ಮಾದಕ ವಸ್ತುಗಳು ಪತ್ತೆಯಾಗಿವೆ. 1.2 ಕೆ.ಜಿ. ಬ್ರೌನ್ ಶುಗರ್, 475 ಗ್ರಾಂ ಅಫೀಮು, 25 ಎಲ್‍ಎಸ್‍ಡಿ ಸ್ಟ್ರಿಪ್ಸ್, 32 ಗ್ರಾಂ ಎಂಡಿಎಂಎ ಫಾಯಿಲ್ ರೋಲ್‌ಗಳು, 3 ಮೊಬೈಲ್, 2 ದ್ವಿಚಕ್ರ ವಾಹನ ಹಾಗೂ 3 ತೂಕದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಎಸಿಪಿ ಮುಧವಿ ಅಮಾನತು
ಬೆಂಗಳೂರು: ಡ್ರಗ್ಸ್ ಪ್ರಕರಣ ತನಿಖೆಯ ಮಾಹಿತಿ ಸೋರಿಕೆ ಮಾಡಿರುವ ಆರೋಪದಡಿ ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿ ಎಂ.ಆರ್.ಮುಧವಿ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿರೇನ್ ಖನ್ನಾಗೆ ರಾತ್ರಿ ವೇಳೆ ಮೊಬೈಲ್ ನೀಡುವ ಮೂಲಕ ಮುಧವಿ, ಆರೋಪಿಗೆ ಸಹಕರಿಸಿದ್ದರು. ಇದಕ್ಕಾಗಿ ಪೇದೆ ಮಲ್ಲಿಕಾರ್ಜುನ್ ಅವರನ್ನು ಬಳಸಿಕೊಂಡಿದ್ದು, ಖನ್ನಾ ಬಳಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಡ್ರಗ್ಸ್ ಪ್ರಕರಣದ ಆರೋಪಿಗಳು ಹಾಗೂ ಅವರ ಸಹಚರರೊಂದಿಗೆ ಮುಧವಿ ಸಂಪರ್ಕದಲ್ಲಿದ್ದರು. ತನಿಖೆಯ ಗೋಪ್ಯ ಮಾಹಿತಿಯನ್ನು ಅವರಿಗೆ ಸೋರಿಕೆ ಮಾಡುತ್ತಿದ್ದ ವಿಚಾರ ತಿಳಿದು ಬಂದಿತ್ತು. ಇದರಲ್ಲಿ ಭಾಗಿಯಾದ ಆರೋಪದಡಿ ಮಲ್ಲಿಕಾರ್ಜುನ್‍ ಅವರನ್ನು ಅಮಾನತು ಮಾಡಲಾಗಿತ್ತು. ಮಾಹಿತಿ ಸೋರಿಕೆಯಿಂದಲೇ ತನಿಖೆ ವಿಳಂಬವಾಗುತ್ತಿದ್ದು, ಮುಧವಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್‌ಗೆ ಸಿಸಿಬಿ ನೀಡಿದ್ದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.