ADVERTISEMENT

ಬೆಂಗಳೂರು | ಲಾಕ್‌ಡೌನ್‌ಗೆ ಜಗ್ಗದ 2 ವಾರ್ಡ್‌ಗಳಲ್ಲಿ 'ಸೀಲ್ ಡೌನ್'

ಬಾಪೂಜಿನಗರ, ಪಾದರಾಯನಪುರ ವಾರ್ಡುಗಳಲ್ಲಿ ಕಟ್ಟುನಿಟ್ಟು ಸೀಲ್‌ಡೌನ್ ಆದೇಶ ಜಾರಿ

ನಿರಂಜನ ಕಗ್ಗೆರೆ
Published 10 ಏಪ್ರಿಲ್ 2020, 9:50 IST
Last Updated 10 ಏಪ್ರಿಲ್ 2020, 9:50 IST
ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮನೆಮನೆ ಸಮೀಕ್ಷೆ ಮಾಡುತ್ತಿದ್ದಾರೆ (ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್)
ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮನೆಮನೆ ಸಮೀಕ್ಷೆ ಮಾಡುತ್ತಿದ್ದಾರೆ (ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್)   

ಬೆಂಗಳೂರು: ನಗರದಲ್ಲಿ ಜನಸಮುದಾಯಕ್ಕೆ ಕೋವಿಡ್-19 ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಹಾಟ್‌ಸ್ಪಾಟ್‌ ಪ್ರದೇಶಗಳನ್ನು ಗುರುತಿಸಿ, ಕ್ಲಾಂಪ್‌ಡೌನ್ (ಸೀಲ್‌ಡೌನ್) ಮಾಡಲು ನಿರ್ಧರಿಸಿದೆ. ಈ ಸ್ಥಳಗಳು ರಾಜ್ಯದ ಇತರ ಪ್ರದೇಶಗಳ ಸಂಪರ್ಕವನ್ನು ಸಂಪೂರ್ಣ ಕಡಿದುಕೊಳ್ಳುತ್ತವೆ.

ಆರಂಭದ ಹೆಜ್ಜೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಚಾಮರಾಜಪೇಟೆ ವ್ಯಾಪ್ತಿಯಲ್ಲಿರುವ ಮೈಸೂರು ರಸ್ತೆಯ ಪಾದರಾಯನಪುರ ಮತ್ತು ಬಾಪೂಜಿನಗರ ವಾರ್ಡ್‌ಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣ ಸೀಲ್ಡ್‌ (ಸೀಲ್‌ಡೌನ್) ಮಾಡಲಾಗಿದೆ. ಈ ವಾರ್ಡ್‌ಗಳಿಗೆ ಬೇರೆಡೆಗಳಿಂದ ಯಾರೂ ಬರುವಂತಿಲ್ಲ, ಇಲ್ಲಿರುವವರು ಬೇರೆಡೆಗೆ ಹೋಗುವಂತಿಲ್ಲ.

'ಸೀಲ್ಡ್' ಆದೇಶ ವಿವರಗಳನ್ನು ಮಾಧ್ಯಮಗಳಿಗೆ ವಿವರಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, 'ಎರಡೂ ವಾರ್ಡ್‌ಗಳಲ್ಲಿ ಜನರ ಸಂಚಾರ ಮತ್ತು ಸರಕು ಸಾಗಣೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದರೆ ಇಡೀ ಬೆಂಗಳೂರಲ್ಲಿ ಸೀಲ್ ಡೌನ್ ಮಾಡಲಾಗುತ್ತದೆ ಎಂಬುದು ಸತ್ಯವಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

'ಈ ವಾರ್ಡ್‌ಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಒಂದು ಸ್ಥಳ ಮಾತ್ರ ಇರುತ್ತದೆ. ವಾರ್ಡ್‌ನ ನಿವಾಸಿಗಳೊಂದಿಗೆ ಸಂಪರ್ಕಕ್ಕೆ ಬರುವ ಎಲ್ಲರನ್ನೂ (ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ, ಸಿವಿಲ್ ಡಿಫೆನ್ಸ್) ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ' ಎಂದು ತಿಳಿಸಿದರು.

ಸೀಲ್ ಡೌನ್ ಪ್ರಕಾರ, ಈ ವಾರ್ಡುಗಳಲ್ಲಿ ಆಸ್ಪತ್ರೆ, ಕ್ಲಿನಿಕ್‌ಗಳನ್ನನು ಹೊರತುಪಡಿಸಿ ಯಾವುದೇ ದಿನಸಿ, ತರಕಾರಿ, ಹಣ್ಣಿನ ಅಂಗಡಿಗಳು ತೆರೆಯುವಂತಿಲ್ಲ.

'14 ದಿನಗಳ ಅವಧಿಗೆ ಎರಡೂ ವಾರ್ಡ್‌ಗಳಲ್ಲಿರುವವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ. ಯಾರೊಬ್ಬರೂ ಮನೆಗಳಿಂದ ಹೊರಗೆ ಬರುವಂತಿಲ್ಲ. ವಾರ್ಡ್‌ಗಳನ್ನು ಬಿಟ್ಟುಹೋಗಲು ಅವಕಾಶ ಕೊಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಈ ವಾರ್ಡ್‌ಗಳ ಕೆಲ ನಿವಾಸಿಗಳಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟುನಿಟ್ಟಿನ ಸೀಲ್ಡ್ ಆದೇಶ ಜಾರಿಗೆ ನಿರ್ಧರಿಸಿತು. ಈ ಪ್ರದೇಶದಲ್ಲಿ ಜನಸಾಂದ್ರತೆಯೂ ಹೆಚ್ಚಾಗಿರುವ ಕಾರಣ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿ ಮಾಡಲು ಕ್ರಮ ವಹಿಸಲಾಯಿತು' ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.