ADVERTISEMENT

ಸ್ಕೂಟರ್‌ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ: ಮಾಗಡಿ ರಸ್ತೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 20:20 IST
Last Updated 17 ಜನವರಿ 2023, 20:20 IST
   

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಜೋತುಬಿದ್ದ ವೃದ್ಧ ಮುತ್ತಪ್ಪ ತೋಂಟಾಪುರ (71) ಅವರನ್ನು ರಸ್ತೆಯಲ್ಲೇ 600 ಮೀಟರ್‌ವರೆಗೆ ಎಳೆದೊಯ್ದು ಕೊಲೆಗೆ ಯತ್ನಿಸಲಾಗಿದೆ. ಕೃತ್ಯ ಎಸಗಿದ ಆರೋಪದಡಿ ದ್ವಿಚಕ್ರ ವಾಹನ ಸವಾರ ಸಾಹಿಲ್‌ನನ್ನು (25) ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯನಗರದ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಮಂಗಳವಾರ ಈ ಘಟನೆ ನಡೆದಿದೆ. ಗಾಯಗೊಂಡಿರುವ ಮುತ್ತಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆ ಯತ್ನ ಹಾಗೂ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಅಪಾಯಕಾರಿ ಚಾಲನೆ ಆರೋಪದಡಿ ಸಾಹಿಲ್‌ನನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರದ ಮುತ್ತಪ್ಪ, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಕುಟುಂಬದ ಜೊತೆ ಹೆಗ್ಗನಹಳ್ಳಿಯಲ್ಲಿ ವಾಸವಿದ್ದಾರೆ. ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾರೆ. ಆರೋಪಿ ಸಾಹಿಲ್, ನಾಯಂಡನಹಳ್ಳಿ ನಿವಾಸಿ. ಔಷಧ ಪೂರೈಕೆ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ’ ಎಂದೂ ಹೇಳಿದರು.

ADVERTISEMENT

ಆಗಿದ್ದೇನು?
‘ಮುತ್ತಪ್ಪ ಅವರು ಕೆಲಸ ನಿಮಿತ್ತ ತಮ್ಮ ಬೊಲೆರೊ ಪಿಕ್‌ಅಪ್‌ ವಾಹನದಲ್ಲಿ ಪಶ್ಚಿಮ ಕಾರ್ಡ್‌ ರಸ್ತೆ ಮಾರ್ಗವಾಗಿ ಚಂದ್ರಾಲೇಔಟ್‌ನಲ್ಲಿರುವ ಕುವೆಂಪು ಭಾಷಾ ಪ್ರಾಧಿಕಾರ ಕಚೇರಿಗೆ ಹೊರಟಿದ್ದರು. ಮಾಗಡಿ ರಸ್ತೆ ಟೋಲ್‌ಗೇಟ್‌ ಸಮೀಪದ ಎಸ್‌ಬಿಐ ಬ್ಯಾಂಕ್‌ ವೃತ್ತದಲ್ಲಿ ಹೋಗುವಾಗ ಮುತ್ತಪ್ಪ ಅವರಿಗೆ ಕರೆ ಬಂದಿತ್ತು. ಹೀಗಾಗಿ, ರಸ್ತೆ ಪಕ್ಕದಲ್ಲಿ ಬೊಲೆರೊ ವಾಹನ ನಿಲ್ಲಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮೊಬೈಲ್‌ನಲ್ಲಿ ಮಾತನಾಡುತ್ತ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ್ದ ಸವಾರ ಸಾಹಿಲ್, ಬೊಲೆರೊ ಪಿಕ್‌ಅಪ್‌ ವಾಹನಕ್ಕೆ ಗುದ್ದಿಸಿದ್ದ. ಇದರಿಂದಾಗಿ ಬೊಲೆರೊ ಹಾಗೂ ದ್ವಿಚಕ್ರ ವಾಹನ ಎರಡೂ ಜಖಂಗೊಂಡಿದ್ದವು.’

‘ವಾಹನದಿಂದ ಕೆಳಗೆ ಇಳಿದಿದ್ದ ಮುತ್ತಪ್ಪ, ಸವಾರ ಸಾಹಿಲ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ತನ್ನದೇನು ತಪ್ಪಿಲ್ಲವೆಂದು ವಾದಿಸಿದ್ದ ಸಾಹಿಲ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ, ದ್ವಿಚಕ್ರ ವಾಹನ ಸಮೇತ ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ. ಆತನನ್ನು ತಡೆದು ನಿಲ್ಲಿಸಲು ಹೋಗಿದ್ದ ಮುತ್ತಪ್ಪ, ದ್ವಿಚಕ್ರ ವಾಹನದ ಬ್ಯಾಕ್‌ ರೆಸ್ಟ್ (ಹಿಂಬದಿ ಹಿಡಿಕೆ) ಹಿಡಿದುಕೊಂಡಿದ್ದರು. ದ್ವಿಚಕ್ರ ವಾಹನ ನಿಲ್ಲಿಸದ ಸಾಹಿಲ್, ಮುತ್ತಪ್ಪ ಅವರನ್ನು ಕೆಳಸೇತುವೆ ಮಾರ್ಗದ ಮೂಲಕ 600 ಮೀಟರ್‌ವರೆಗೂ ರಸ್ತೆಯಲ್ಲೇ ಎಳೆದೊಯ್ದಿದ್ದ. ವಾಹನ ನಿಲ್ಲಿಸುವಂತೆ ಬೇಡಿಕೊಂಡರೂ ಆರೋಪಿ ನಿಲ್ಲಿಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಮುತ್ತಪ್ಪ ಅವರನ್ನು ಎಳೆದೊಯ್ಯುತ್ತಿದ್ದ ದೃಶ್ಯ ಕಂಡಿದ್ದ ಸ್ಥಳೀಯರು, ಆರೋಪಿಯನ್ನು ಬೆನ್ನಟ್ಟಿದ್ದರು. ಹೊಸಹಳ್ಳಿ ಮೆಟ್ರೊ ನಿಲ್ದಾಣ ಸಮೀಪದಲ್ಲಿ ದ್ವಿಚಕ್ರ ವಾಹನ ತಡೆದಿದ್ದರು. ನಂತರವೇ, ಗಸ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ತಿಳಿಸಿದರು.

ಜನರು ತಡೆಯದಿದ್ದರೆ ಕೊಲೆ: ‘ಅಪಘಾತವನ್ನುಂಟು ಮಾಡಿ ಪರಾರಿಯಾಗುತ್ತಿದ್ದ ಸಾಹಿಲ್‌ನನ್ನು ಹಿಡಿದುಕೊಳ್ಳಲು ಹೋದಾಗ, ರಸ್ತೆಯಲ್ಲೇ ನನ್ನನ್ನು ಎಳೆದೊಯ್ದ. ಜನರು ಅಡ್ಡಗಟ್ಟಿ ತಡೆಯದಿದ್ದರೆ ಆತ ನನ್ನನ್ನು ಕೊಲೆ ಮಾಡುತ್ತಿದ್ದ’ ಎಂದು ಗಾಯಾಳು ಮುತ್ತಪ್ಪ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ದ್ವಿಚಕ್ರ ವಾಹನ ನಿಲ್ಲಿಸುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ಆತ ಪ್ರತಿಕ್ರಿಯಿಸಲಿಲ್ಲ. ಕೊಲೆ ಮಾಡುವ ಉದ್ದೇಶ ಅವನದ್ದಾಗಿತ್ತು. ಘಟನೆಯಿಂದಾಗಿ ಎರಡೂ ಕಾಲು, ಸೊಂಟ ಹಾಗೂ ದೇಹದ ಇತರೆಡೆ ಗಾಯಗಳಾಗಿವೆ. ಕೃತ್ಯಕ್ಕೆ ಕಾರಣವಾದ ಆರೋಪಿ ಸಾಹಿಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಮುತ್ತಪ್ಪ ಒತ್ತಾಯಿಸಿದ್ದಾರೆ.

ಘಟನೆ ಬಗ್ಗೆ ಹೇಳಿಕೆ ನೀಡಿರುವ ಸಾಹಿಲ್, ‘ಅಪಘಾತದ ಸ್ಥಳದಲ್ಲಿ ಮುತ್ತಪ್ಪ ಅವರೇ ನನ್ನ ಮೇಲೆ ಹಲ್ಲೆ ಮಾಡಿದರು. ಜನರು ಸೇರುತ್ತಿದ್ದಂತೆ ಭಯಗೊಂಡು ಪರಾರಿಯಾಗಲು ಯತ್ನಿಸಿದೆ. ಬ್ಯಾಕ್ ರೆಸ್ಟ್ ಹಿಡಿದಿದ್ದ ಮುತ್ತಪ್ಪ ಅವರನ್ನು ಬಿಡಿಸಲು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದೆ’ ಎಂದಿದ್ದಾನೆ.

ಅಪಘಾತ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲೂ ಸಾಹಿಲ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.