ADVERTISEMENT

ಬೆಂಗಳೂರಲ್ಲಿ ನಿತ್ಯ ಸರಾಸರಿ 13 ದ್ವಿಚಕ್ರ ವಾಹನ ಕಳವು!

ಹ್ಯಾಂಡಲ್ ಲಾಕ್ ಮುರಿದು ಕಳ್ಳತನ, ಬೆಚ್ಚಿಬಿದ್ದ ಮಾಲೀಕ

ಕೆ.ಎಸ್.ಸುನಿಲ್
Published 7 ಮೇ 2025, 1:14 IST
Last Updated 7 ಮೇ 2025, 1:14 IST
ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡ ದ್ವಿಚಕ್ರ ವಾಹನಗಳು.
ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡ ದ್ವಿಚಕ್ರ ವಾಹನಗಳು.   

ಬೆಂಗಳೂರು: ನಗರದಲ್ಲಿ ವಿವಿಧ ಮಾದರಿಯ ವಾಹನಗಳ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಬಸ್‌, ಸೈಕಲ್ ಸಹಿತ ಹನ್ನೆರಡು ಸಾವಿರಕ್ಕೂ ಅಧಿಕ ವಾಹನಗಳ ಕಳ್ಳತನವಾಗಿವೆ. ಈ ಪೈಕಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಶೇಕಡ 96ರಷ್ಟಿದೆ.

2023ರಲ್ಲಿ 5,828, 2024ರಲ್ಲಿ 5,241, 2025ರಲ್ಲಿ (ಏಪ್ರಿಲ್ 25ರ ವರೆಗೆ) 1,368 ವಾಹನಗಳು ಕಳ್ಳತನವಾಗಿವೆ. ಇದರಲ್ಲಿ ಸೈಕಲ್, ಲಾರಿ, ಟ್ರಕ್, ಬಸ್‌, ಕಾರು, ಜೀಪು, ದ್ವಿಚಕ್ರ ವಾಹನಗಳು ಒಳಗೊಂಡಿವೆ.

2023ರಿಂದ 2025ರ ಏಪ್ರಿಲ್ ವರೆಗೆ 12,437 ವಿವಿಧ ಮಾದರಿಯ ವಾಹನಗಳು ಕಳ್ಳತನವಾಗಿವೆ. ಈ ಪೈಕಿ 11,943 ದ್ವಿಚಕ್ರ ವಾಹನ ಕಳ್ಳತನವಾಗಿದ್ದು, ನಿತ್ಯ ಸರಾಸರಿ 13ರಿಂದ 15 ದ್ವಿಚಕ್ರ ವಾಹನಗಳ ಕಳ್ಳತನ ನಡೆದಿದೆ. 

ADVERTISEMENT

ಕದ್ದ ವಾಹನಗಳನ್ನು ಆರೋಪಿಗಳು ಅಪರಾಧ ಪ್ರಕರಣಗಳಿಗೆ ಬಳಕೆ ಮಾಡುತ್ತಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಮಹಿಳೆಯರ ಚಿನ್ನದ ಸರ ಕಳವು, ದರೋಡೆ, ಕೊಲೆ, ಕೊಲೆ ಯತ್ನ, ಗಂಧದ ತುಂಡು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಣೆ, ಮನೆ ಕಳ್ಳತನ, ಅಪಹರಣ ಪ್ರಕರಣಗಳಿಗೆ ಬಳಸಲಾಗಿದೆ ಎಂಬುದು ಗೊತ್ತಾಗಿದೆ.  

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದು ನಗರದಲ್ಲಿ ವಾಹನಗಳನ್ನು ಕಳ್ಳತನ ಮಾಡಿ, ಅವುಗಳ ಬಿಡಿಭಾಗಗಳನ್ನು ಬೇರ್ಪಡಿಸಿ, ವಾಹನದ ಎಂಜಿನ್ ಮತ್ತು ಚಾಸ್ಸಿ ಸಂಖ್ಯೆಯನ್ನು ತಿದ್ದುಪಡಿ ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. 

ಸಾಲ ತೀರಿಸಲು ಹಾಗೂ ವಿಲಾಸಿ ಜೀವನ ನಡೆಸಲು ಕಳವು, ಜಾಲಿ ರೈಡ್‌ಗಾಗಿ ಐಷಾರಾಮಿ ಬೈಕ್‌ಗಳ ಕಳ್ಳತನ, ಪ್ರೇಯಸಿಗೆ ಗಿಫ್ಟ್‌ ಕೊಡಲು ಕಳ್ಳತನ.. ಹೀಗೆ ಹತ್ತಾರು ನೆಪದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಆಗಿರುವುದು ತನಿಖೆ ವೇಳೆ ಗೊತ್ತಾಗಿದೆ.

‘ಜನ ವಸತಿ ಪ್ರದೇಶಗಳಲ್ಲಿ ಶೇ 90ರಷ್ಟು ವಾಹನಗಳ ಕಳ್ಳತನವಾಗಿದೆ. ಮನೆಗಳ ಮುಂದೆ, ಪೇಯಿಂಗ್ ಗೆಸ್ಟ್‌ಗಳ ಮುಂಭಾಗ ನಿಲ್ಲಿಸಿದ್ದ ವಾಹನಗಳು ಹೆಚ್ಚು ಕಳ್ಳತನವಾಗಿದೆ. ಕದ್ದ ವಾಹನಗಳನ್ನು ಗಂಭೀರ ಅಪರಾಧ ಕೃತ್ಯಗಳಿಗೆ ಬಳಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ರಸ್ತೆಬದಿ, ಪಾರ್ಕಿಂಗ್ ಸ್ಥಳ, ಶಾಪಿಂಗ್ ಮಾಲ್, ಉದ್ಯಾನ, ಬಸ್– ರೈಲು ನಿಲ್ದಾಣ, ಮನೆ–ಕಚೇರಿ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್‌ಗಳನ್ನು ಅನ್‌ಲಾಕ್ ಮಾಡಿ ಕದಿಯುವವರ ಜಾಲ ಜೋರಾಗಿದೆ. ಈ ವಾಹನಗಳ ನಂಬರ್ ಪ್ಲೇಟ್‌, ಎಂಜಿನ್ ನಂಬರ್ ಬದಲಿಸಿ, ನೆರೆಯ ಆಂಧ್ರಪ್ರದೇಶ, ಕೇರಳ ಹಾಗೂ ಇತರೆ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಜಿಪಿಎಸ್, ವ್ಹೀಲ್ ಲಾಕಿಂಗ್, ಗಟ್ಟಿಮುಟ್ಟಾದ ಹ್ಯಾಂಡಲ್ ಲಾಕಿಂಗ್ ಮತ್ತು ಕಳವು ತಡೆ ಸಾಧನ ಅಳವಡಿಸಬೇಕು. ಅಲ್ಲದೇ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡಬೇಕು’ ಎಂದು ಪೊಲೀಸರು ಸಲಹೆ ನೀಡಿದ್ದಾರೆ. 

ಬಿ.ದಯಾನಂದ 

ಹೆಚ್ಚಿನ ಗಸ್ತು ಜಾಗೃತಿ ಅಭಿಯಾನಗಳ ಮೂಲಕ ಕಳ್ಳತನ ತಡೆಗಟ್ಟುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ

– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್ 

₹26 ಕೋಟಿ ಮೌಲ್ಯದ ವಾಹನ ಕಳವು

2024ರಲ್ಲಿ 5351 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿದ್ದು ಇದರ ಮೌಲ್ಯ ₹26.53 ಕೋಟಿ. ಈ ಪೈಕಿ 2040 ಪ್ರಕರಣಗಳು ಪತ್ತೆಯಾಗಿದ್ದು ₹13.24 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದ ವಾಹನಗಳ ಪತ್ತೆ ಕಾರ್ಯ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.