ADVERTISEMENT

ಮಧುಮೇಹಿ ಮಕ್ಕಳಿಗೆ ಉಚಿತ ಇನ್ಸುಲಿನ್!

ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಸಲು ಆರೋಗ್ಯ ಇಲಾಖೆ ಕ್ರಮ

ವರುಣ ಹೆಗಡೆ
Published 13 ನವೆಂಬರ್ 2023, 20:13 IST
Last Updated 13 ನವೆಂಬರ್ 2023, 20:13 IST
   

ಬೆಂಗಳೂರು: ಮಧುಮೇಹ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸರ್ಕಾರಿ ವ್ಯವಸ್ಥೆಯಡಿಯೇ ಉಚಿತವಾಗಿ ಇನ್ಸುಲಿನ್ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜನವರಿ ವೇಳೆಗೆ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಲಭ್ಯವಾಗುವ ಸಾಧ್ಯತೆಯಿದೆ. 

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಟೈಪ್ 1 ಮಧುಮೇಹ (ಜುವೆನೈಲ್ ಡಯಾಬಿಟಿಸ್) ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಗೆ ಒಳಗಾದವರಿಗೆ ನಿಯಮಿತವಾಗಿ ಇನ್ಸುಲಿನ್ ಅಗತ್ಯ. ಸರ್ಕಾರಿ ವ್ಯವಸ್ಥೆಯಡಿ ಸದ್ಯ ಉಚಿತವಾಗಿ ದೊರೆಯದಿದ್ದರಿಂದ ಇನ್ಸುಲಿನ್‌ಗೆ ಪ್ರತಿ ತಿಂಗಳು ₹ 5 ಸಾವಿರದಿಂದ ₹6 ಸಾವಿರ ವೆಚ್ಚ ಮಾಡಬೇಕಾಗಿದೆ. ಅತಿಯಾದ ದೇಹದ ತೂಕ, ನಿಯಮಿತ ವ್ಯಾಯಾಮದ ಕೊರತೆ, ಅತಿಯಾದ ಕೊಬ್ಬು ಮಿಶ್ರಿತ ಆಹಾರ ಸೇವನೆ, ಅನಿಯಂತ್ರಿತ ರಕ್ತದೊತ್ತಡ, ಕುಟುಂಬದಲ್ಲಿ ಸಕ್ಕರೆ ಕಾಯಿಲೆ ಇತಿಹಾಸ ಸೇರಿ ವಿವಿಧ ಕಾರಣಗಳಿಂದ ಮಧುಮೇಹ ಮಕ್ಕಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 

ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ಮಕ್ಕಳು ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಿದೆ. ಇವರಲ್ಲಿ 5 ಸಾವಿರದಿಂದ 6 ಸಾವಿರ ಮಕ್ಕಳು ಇನ್ಸುಲಿನ್‌ ಸಂಬಂಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಬಗ್ಗೆ ಇಲಾಖೆ ಲೆಕ್ಕಾಚಾರ ಹಾಕಿದೆ. ಇಷ್ಟೂ ಮಕ್ಕಳಿಗೆ ಇಲಾಖೆಯು ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಉಚಿತವಾಗಿಯೇ ನಿಯಮಿತವಾಗಿ ಇನ್ಸುಲಿನ್ ಒದಗಿಸಲು ಕ್ರಮವಹಿಸಿದೆ.

ADVERTISEMENT

ಖರೀದಿಗೆ ₹ 25 ಕೋಟಿ : ಬಿಪಿಎಲ್ ಹಾಗೂ ಎಪಿಎಲ್ ಕುಟುಂಬದ ಸದಸ್ಯರೆಂದು ವಿಂಗಡಿಸದೆ, ಎಲ್ಲ ಮಕ್ಕಳನ್ನೂ ಯೋಜನೆಯಡಿ ಪರಿಗಣಿಸಿ, ಇನ್ಸುಲಿನ್ ಒದಗಿಸಲಾಗುತ್ತೆ. ₹ 25 ಕೋಟಿ ವೆಚ್ಚದಲ್ಲಿ ಇನ್ಸುಲಿನ್ ಖರೀದಿ ಪ್ರಕ್ರಿಯೆಯನ್ನು ಇಲಾಖೆ ಪ್ರಾರಂಭಿಸಿದೆ. 

‘ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇನ್ಸುಲಿನ್ ಒದಗಿಸಲಾಗುತ್ತಿದೆ. ನವಜಾತ ಶಿಶುಗಳಲ್ಲಿ ಮಧುಮೇಹ ದೃಢಪಟ್ಟರೆ, ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಒದಗಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇಷ್ಟು ದಿನ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್‌ ಸಿಗುತ್ತಿರಲಿಲ್ಲ. ಆದ್ದರಿಂದ ಇದನ್ನು ಖರೀದಿಸಿ, ಒದಗಿಸಲು ಕ್ರಮವಹಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ ತಪಾಸಣೆ

ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ (ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌) ತಪಾಸಣೆ ನಡೆಸುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಹಂತದ 30 ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್‌.ಸಿ–ಎನ್‌.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ತಪಾಸಣೆಯಲ್ಲಿ ಪ್ರತಿವರ್ಷ 90 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗುತ್ತಿದೆ.

ಟೈಪ್‌ 2 ಮಧುಮೇಹವೂ ಹೆಚ್ಚಳ

‘ಟೈಪ್‌ 1 ಮಧುಮೇಹ ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ದೃಢಪಟ್ಟಲ್ಲಿ ನಿರಂತರ ಇನ್ಸುಲಿನ್ ಪಡೆದುಕೊಳ್ಳುತ್ತಲೇ ಇರಬೇಕು. ಇದಕ್ಕೆ ಮಾತ್ರೆಗಳಿಲ್ಲ. ಟೈಪ್‌ 2 ಮಧುಮೇಹ ಈ ಹಿಂದೆ 40 ವರ್ಷಗಳು ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇತ್ತೀಚೆಗೆ 30 ವರ್ಷದೊಳಗಿನವರಲ್ಲಿಯೂ ಹೆಚ್ಚಾಗಿದೆ. ಪಾಶ್ಚಾತ್ಯ ಆಹಾರ ಪದ್ಧತಿ ಬದಲಾದ ಜೀವನಶೈಲಿ ದೈಹಿಕ ಚಟುವಟಿಕೆ ಇಲ್ಲದಿರುವುದು ಸೇರಿ ವಿವಿಧ ಕಾರಣಗಳಿಂದ ಟೈಪ್ 2 ಮಧುಮೇಹಿಗಳ ಸಂಖ್ಯೆ ಏರಿಕೆಯಾಗಿದೆ’ ಎಂದು ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ ಹೊರರೋಗಿ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಕುಮಾರ್ ಆರ್. ತಿಳಿಸಿದರು. ‘ಕಂಪ್ಯೂಟರ್ ಟಿ.ವಿ.ಯಂತಹ ಸಾಧನಗಳ ಮುಂದೆ ಅಧಿಕ ಸಮಯ ಕಳೆಯುತ್ತಿರುವುದರಿಂದ 16–17 ವರ್ಷದವರಲ್ಲಿಯೂ ಟೈಪ್‌ 2 ಮಧುಮೇಹ ಕಾಣಿಸಿಕೊಳ್ಳುತ್ತಿದೆ. ನಮ್ಮ ಸಂಸ್ಥೆಯಲ್ಲಿ 3600 ಯುವ ಮಧುಮೇಹಿಗಳ ಮೇಲೆ ಸಂಶೋಧನೆ ನಡೆಸಲಾಗಿತ್ತು. ಅವರಲ್ಲಿ ಶೇ 70 ರಷ್ಟು ಮಂದಿಯಲ್ಲಿ ಟೈಪ್ 2 ಹಾಗೂ ಶೇ 30 ರಷ್ಟು ಮಂದಿಯಲ್ಲಿ ಟೈಪ್‌ 1 ಮಧುಮೇಹ ದೃಢಪಟ್ಟಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.