ADVERTISEMENT

ಬೆಂಗಳೂರಿನಲ್ಲಿ ಉಬರ್‌ –ಕೋಕಾಕೋಲಾ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 23:01 IST
Last Updated 23 ಜನವರಿ 2020, 23:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರಿನಲ್ಲಿ ಉಬರ್‌ ಕಂಪನಿಯ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಆಸಕ್ತಿಯನ್ನು ಕಂಪನಿಯ ಸಿಇಒ ಡಾರಾ ಖೋಸ್ರೋವ್‌ ಶಾಹಿ ವ್ಯಕ್ತಪಡಿಸಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ ವೇಳೆ ಈ ವಿಷಯ ತಿಳಿಸಿ, ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ಕೋಕಾಕೋಲಾದ ಪ್ರತಿನಿಧಿಗಳು ಭೇಟಿ ಮಾಡಿ, 25 ದಶಲಕ್ಷ ಡಾಲರ್‌ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್‌ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದರು.

ADVERTISEMENT

ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ಜೆಮಿನಿ ಕಾರ್ಪೊರೇಷನ್, ಎಸ್ಎಪಿ ಲ್ಯಾಬ್ಸ್, ಸ್ವಿಸ್ ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್‌ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು.

ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.