ಬೆಂಗಳೂರು: ಇಲ್ಲಿನ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್‌ನಲ್ಲಿ (ಎಚ್‌ಸಿಜಿ) ನ್ಯಾಯಯುತವಲ್ಲದ ವೈದ್ಯಕೀಯ ಪ್ರಯೋಗ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ಎಚ್‌ಸಿಜಿಯ ಸಾಂಸ್ಥಿಕ ನೀತಿ ಸಮಿತಿಯ ಮಾಜಿ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರು, ಎಚ್‌ಸಿಜಿ ಸಂಸ್ಥೆಯಲ್ಲಿ ನಡೆಯುತ್ತಿರುವ ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದಂತೆ ಆರೋಪಿಸಿದ್ದಾರೆ.
ಎಚ್‌ಸಿಜಿಯಲ್ಲಿ ರೋಗಿಗಳ ಸುರಕ್ಷತೆ, ದಾಖಲಾತಿ, ವೈದ್ಯಕೀಯ ಪ್ರಯೋಗ ಸೇರಿ ವಿವಿಧ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಲ್ಲಿನ ಸಾಂಸ್ಥಿಕ ನೀತಿ ಸಮಿತಿ ಅಧ್ಯಕ್ಷರಾಗಿದ್ದವರೇ ಈ ಬಗ್ಗೆ ಆರೋಪಿಸಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ವಿಷಯವು ಗಂಭೀರ ಹಾಗೂ ಕಳವಳಕಾರಿಯಾಗಿದೆ. ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ನ್ಯಾಯಯುತವಲ್ಲದ, ವೈದ್ಯಕೀಯ ಪ್ರಯೋಗಗಳ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.