
ಬೆಂಗಳೂರು: ವಿಭಾಗವಾರು ನಿಗದಿ ಮಾಡುವ ಮೀಸಲಾತಿ ಹಾಗೂ ಘಟಕವಾರು ನಿಗದಿ ಮಾಡುವ ಮೀಸಲಾತಿ ನಡುವೆ ಇರುವ ವ್ಯತ್ಯಾಸ ಮತ್ತು ಯಾವ ಕ್ರಮ ಅನುಸರಿಸಿದರೆ ಪರಿಶಿಷ್ಟ ವರ್ಗದ ಯುವಕ–ಯುವತಿಯರಿಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಚರ್ಚೆ ನಡೆಸಿದರು.
ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅಥವಾ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಎಂಬುದರ ಬಗ್ಗೆ ಚರ್ಚೆಗಳಾದವು.
ಒಳ ಮೀಸಲಾತಿಯನ್ನು ಒಳಗೊಂಡಂತೆ ಮಾಡಲಾಗುವ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಎಲ್ಲರಿಗೂ ನ್ಯಾಯಬದ್ಧ ಅವಕಾಶಗಳನ್ನು ನೀಡುವ ಉದ್ದೇಶದಿಂದ ನಡೆಸಿದ ಸಭೆಯು ಹೆಚ್ಚು ಉಪಯುಕ್ತವಾಗಿದೆ ಎಂದು ಸಚಿವರು ತಿಳಿಸಿದರು.
ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಶೋಷಿತ ಸಮುದಾಯದ ಯಾರಿಗೂ ಅನ್ಯಾಯವಾಗಬಾರದು. ಉದ್ಯೋಗಾವಕಾಶ ನೀಡುವಾಗ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ಜಾತಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಲು ಯಾವ ನೀತಿ ಅನುಸರಿಸಬಹುದು ಎಂಬ ಬಗ್ಗೆಯೂ ಸಚಿವರು ಚರ್ಚಿಸಿದರು.
ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.