ADVERTISEMENT

ಕುಡಿಯುವ ನೀರು ಅನ್ಯ ಉದ್ದೇಶಕ್ಕೆ ಬಳಕೆ ನಿಷೇಧ: ಬಿಡಬ್ಲ್ಯುಎಸ್‌ಎಸ್‌ಬಿ ಆದೇಶ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:50 IST
Last Updated 8 ಮಾರ್ಚ್ 2024, 15:50 IST
ವಿ. ರಾಮ್ ಪ್ರಸಾತ್ ಮನೋಹರ್
ವಿ. ರಾಮ್ ಪ್ರಸಾತ್ ಮನೋಹರ್   

ಬೆಂಗಳೂರು: ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ, ಮನೋರಂಜನ ಕಾರಂಜಿಗಳಿಗೆ ಬಳಸುವಂತಿಲ್ಲ. ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸುವಂತಿಲ್ಲ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ವಿ.ರಾಮ್‌ ಪ್ರಸಾತ್ ಮನೋಹರ್ ಆದೇಶದಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964ರ ಕಲಂ 109ರಂತೆ ₹ 5 ಸಾವಿರ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ನಿತ್ಯ ₹500 ದಂಡ ಹಾಕಲಾಗುವುದು. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ: 1916ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಮನವಿ ಮಾಡಿದ್ದಾರೆ.

ADVERTISEMENT

ಬೆಂಗಳೂರು ನಗರದಲ್ಲಿರುವ ಕಾಯಂ ವಾಸಿಗಳು ಹಾಗೂ ಬಂದು ಹೋಗುವರು ಸೇರಿ ಸುಮಾರು 1.40 ಕೋಟಿ ಜನಸಂಖ್ಯೆ ಇದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ನಿತ್ಯ ಉಷ್ಣಾಂಶ ಏರುತ್ತಿದೆ. ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದಿದೆ. ಹಾಗಾಗಿ, ನೀರು ವ್ಯರ್ಥ ಮಾಡುವುದನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಆದ್ದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.