ಯಲಹಂಕ: ವಿಜ್ಞಾನ, ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಮತ್ತು ಶಕ್ತಿಯನ್ನು ಕಡಿಮೆಗೊಳಿಸುತ್ತಿದೆ. ಇದು ಮುಂದುವರಿದರೆ ಮನುಷ್ಯ ಇನ್ನಷ್ಟು ಶಕ್ತಿ, ಸಾಮರ್ಥ್ಯ ಕಳೆದುಕೊಳ್ಳುತ್ತಾನೆ ಎಂದು ಇಸ್ರೊ ಮಾಜಿ ಅಧ್ಯಕ್ಷ, ವಿಜ್ಞಾನಿ ಎ.ಎಸ್.ಕಿರಣ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಹೊನ್ನೇನಹಳ್ಳಿಯಲ್ಲಿರುವ ವಿಶ್ವವಿದ್ಯಾಪೀಠ ಸಮೂಹಶಾಲೆ ಮತ್ತು ಸೀಡ್ ಸ್ಯಾಪಲಿಂಗ್ ಎಜುಕೇಶನ್ ಹಾಗೂ ಟ್ಯಾಕ್ಟ್ ದಿ ಅಕಾಡೆಮಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ಐದು ದಿನಗಳ ಗಣಿತಮೇಳದಲ್ಲಿ ಅವರು ಮಾತನಾಡಿದರು.
‘ಹೊಸ ಹೊಸ ಮಷಿನ್ ಮತ್ತು ಟೂಲ್ಸ್‌ಗಳ ಆವಿಷ್ಕಾರಗಳು ನಡೆಯುತ್ತಲೇ ಇವೆ. ದಿನದಿಂದ ದಿನಕ್ಕೆ ಮನುಷ್ಯ ಶ್ರಮ ಕಡಿಮೆಯಾಗುತ್ತಿದೆ’ ಎಂದರು.
‘ಗಣಿತದಲ್ಲಿ ನಮ್ಮ ಜೀವನದ ಎಲ್ಲ ಕ್ರಿಯೆಗಳು ಅಡಕವಾಗಿವೆ. ಸರಿಯಾಗಿ ಅರಿತರೆ ಗಣಿತ ಕಷ್ಟವಲ್ಲ. ಈ ನಿಟ್ಟಿನಲ್ಲಿ ಗಣಿತ ಮೇಳ ಆಯೋಜಿಸಿರುವುದು ಶ್ಲಾಘನೀಯ’ ಎಂದರು.
ಶಾಲೆಯ ನಿರ್ದೇಶಕಿ ಸುಶೀಲ ಸಂತೋಷ್, ‘ಭಾರತೀಯ ಗಣಿತ ವಿಜ್ಞಾನಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಪ್ರಯುಕ್ತ ಗಣಿತಮೇಳ ಏರ್ಪಡಿಸಲಾಗಿದೆ. 15ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಆಹ್ವಾನಿಸಲಾಗಿದೆ. ಗಣಿತಜ್ಞರು ಹರಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳೊಂದಿಗೆ ವಿಚಾರವಿನಿಮಯ ನಡೆಸುವ ಮೂಲಕ ಗಣಿತದ ಬಗ್ಗೆ ಇರುವ ಭಯವನ್ನು ದೂರ ಮಾಡಿ, ಆನಂದದಿಂದ ಗಣಿತ ಕಲಿಯುವ ರೀತಿಯಲ್ಲಿ ಪ್ರೇರೇಪಿಸಲಿದ್ದಾರೆ’ ಎಂದು ತಿಳಿಸಿದರು.
ಮೇಳದಲ್ಲಿ 45 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಗಣಿತ, ಭೌತವಿಜ್ಞಾನ, ಖಗೋಳ ವಿಜ್ಞಾನ, ಪಜಲ್, ಕ್ರೀಡೆ, ಭರತನಾಟ್ಯ, ಸಂಗೀತ, ಜುಗಲ್‌ಬಂದಿ, ನಾಟಕ, ಜಾದೂ ಪ್ರಯೋಗಗಳು ಸೇರಿದಂತೆ ಪ್ರತಿ ಮಳಿಗೆಯಲ್ಲೂ ವಿವಿಧ ಪ್ರಕಾರಗಳನ್ನು ಗಣಿತದ ಮೂಲಕ ತಿಳಿಸಲಾಗುವುದು. ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವೂ ಗಣಿತದೊಂದಿಗೆ ಸಮ್ಮಿಲನಗೊಂಡಿದೆ ಎಂದು ಮಾಹಿತಿ ನೀಡಿದರು. ಶಾಸಕ ಎಸ್. ಆರ್.ವಿಶ್ವನಾಥ್ ಗಣಿತಮೇಳಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.