ADVERTISEMENT

ಗೋವಿಂದರಾಜನಗರದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 16:46 IST
Last Updated 14 ಜನವರಿ 2022, 16:46 IST
ಅಧಿಕಾರಿಗಳ ಸಭೆ ನಡೆಸಿದ ಸಚಿವ ವಿ. ಸೋಮಣ್ಣ. ಮುಖ್ಯ ಎಂಜಿನಿಯರ್‌ಗಳಾದ ವಿಶ್ವನಾಥ್, ಬಿ.ಎಸ್. ಪ್ರಹ್ಲಾದ್, ಸುಗುಣಾ ಇದ್ದರು
ಅಧಿಕಾರಿಗಳ ಸಭೆ ನಡೆಸಿದ ಸಚಿವ ವಿ. ಸೋಮಣ್ಣ. ಮುಖ್ಯ ಎಂಜಿನಿಯರ್‌ಗಳಾದ ವಿಶ್ವನಾಥ್, ಬಿ.ಎಸ್. ಪ್ರಹ್ಲಾದ್, ಸುಗುಣಾ ಇದ್ದರು   

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಗಳು, ಆಸ್ಪತ್ರೆ, ಶಾಲಾ ಕಟ್ಟಡ, ಕೆರೆ ಮತ್ತು ರಾಜಕಾಲುವೆ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ವಸತಿ ಸಚಿವ ವಿ. ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು, ‘ಕೂಡಲೇ ವಿಸ್ತೃತ ಯೋಜನಾ ವರದಿ ರೂಪಿಸಿ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾಗೂ ವಿದ್ಯುತ್ ಪರಿವರ್ತಕ ಬದಲಾವಣೆ ಸೇರಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು 20 ದಿನಗಳಲ್ಲಿ ಪೂರ್ಣಗೊಳಿಸಬೇಕು. ಪಂತರಪಾಳ್ಯ ಆಸ್ಪತ್ರೆ ಬಳಿಯಿರುವ ವಿದ್ಯುತ್ ಪರಿವರ್ತಕದ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು. ಮಾಗಡಿ ರಸ್ತೆ ಮಾರ್ಗದಲ್ಲಿ ಅಳವಡಿಸಿರುವ ಎಚ್‌.ಟಿ ವಿದ್ಯುತ್ ಕೇಬಲ್‌ಗಳು ರಸ್ತೆ ಬದಿ ಬಿದ್ದಿದ್ದು, ಅವುಗಳನ್ನು ತೆರವುಗೊಳಿಸಿ ಯಾವುದೇ ತೊಂದರೆಯಾಗದಂತೆ ನೊಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ರಸ್ತೆ ಬದಿ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಬೇಕು. ಪಂತರಪಾಳ್ಯದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಯ ಕಟ್ಟಡವನ್ನು ಮೂರು ಅಂತಸ್ತಿಗೆ ಬದಲು ನಾಲ್ಕು ಅಂತಸ್ತಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಎಂ.ಸಿ ಲೇಔಟ್ ಆಸ್ಪತ್ರೆ ಅಭಿವೃದಿ ಕಾರ್ಯವನ್ನು ಚುರುಕುಗೊಳಿಸಿ ಮುಗಿಸಬೇಕು ಎಂದೂ ಸೂಚನೆ ನೀಡಿದರು.

ಕ್ಷೇತ್ರದಲ್ಲಿ 16 ಸಾವಿರ ಬೀದಿ ದೀಪಗಳು ಬರಲಿದ್ದು, ಪ್ರಾಯೋಗಿಕ ಯೋಜನೆಯಡಿ ಎಲ್ಲಾ ಬೀದಿ ದೀಪಗಳನ್ನು ಎಲ್.ಇ.ಡಿ ದೀಪಗಳನ್ನಾಗಿ ಬದಲಿಸುವ, ವೃತ್ತಗಳಲ್ಲಿನ ಹೈಮಾಸ್ಟ್ ದೀಪಗಳನ್ನು ಬದಲಿಸುವ ಸಂಬಂಧ ಯೋಜನೆ ರೂಪಿಸಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.