ADVERTISEMENT

ಕೋವಿಡ್‌ ಲಸಿಕೆ ಪಡೆದ 102ರ ಹಿರಿಯಜ್ಜ

ಮೊದಲ ದಿನ 1950 ಹಿರಿಯರಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 21:09 IST
Last Updated 1 ಮಾರ್ಚ್ 2021, 21:09 IST
ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸೋಮವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡ 102 ವರ್ಷದ ಕೆ.ಎನ್. ಸುಬ್ರಮಣಿಯನ್.
ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸೋಮವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡ 102 ವರ್ಷದ ಕೆ.ಎನ್. ಸುಬ್ರಮಣಿಯನ್.   

ಬೆಂಗಳೂರು: ರಾಜ್ಯದಾದ್ಯಂತ ಸಾರ್ವಜನಿಕರಿಗೆ ಲಸಿಕೆ ನೀಡುವ ಅಭಿಯಾನ (2.0) ಸೋಮವಾರದಿಂದ ಆರಂಭವಾಯಿತು. ಮೊದಲ ದಿನ ಹಿರಿಯರಿಗೆ ಅಂದರೆ, 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗಿದ್ದು, 1950 ಜನ ಲಸಿಕೆ ಪಡೆದರು.

ನಿವೃತ್ತ ಸೇನಾಧಿಕಾರಿ 102 ವರ್ಷದ ಕೆ.ಎನ್. ಸುಬ್ರಮಣಿಯನ್‌ ನಗರದ ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ, ಈ ಹಂತದಲ್ಲಿ ಲಸಿಕೆ ಪಡೆದ ಮೊದಲ ಹಿರಿಯ ನಾಗರಿಕ ಎನಿಸಿಕೊಂಡರು.

ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ 374 ಜನ ಹಾಗೂ 6 ವರ್ಷ ಮೇಲ್ಪಟ್ಟ 1,576 ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಂಡರು. ರಾಜ್ಯದ 30 ಜಿಲ್ಲೆಗಳ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆ ಹಾಗೂ ಪ್ರತಿ ಜಿಲ್ಲೆಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೆಲವೆಡೆ ಕೋವಿನ್ ಪೋರ್ಟಲ್ ಸಂಪೂರ್ಣ ಸ್ಥಗಿತಗೊಂಡು ಲಸಿಕೆ ವಿತರಣೆ ಕಾರ್ಯ ನಡೆಯಲಿಲ್ಲ.

ADVERTISEMENT

ನೋಂದಾಯಿಸದವರಿಗೆ ನಿರಾಸೆ:

ಕೋವಿನ್ ಪೋರ್ಟಲ್‌ ಹಾಗೂ ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದ ಹಿರಿಯ ನಾಗರಿಕರು ಸಮೀಪದ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಸಂಜೆ 6ರವರೆಗೆ ಲಸಿಕೆ ಪಡೆಯಲು ಅವಕಾಶವಿತ್ತು.ನೋಂದಾಯಿಸಿಕೊಳ್ಳದೆ ಬಂದವರು ನಿರಾಸೆಗೆ ಒಳಗಾಗಬೇಕಾಯಿತು.

ನೋಂದಣಿ ಆರಂಭವಾದ ಮೂರು ಗಂಟೆಗಳ ನಂತರ, ಮಧ್ಯಾಹ್ನ 12 ಗಂಟೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತು. ಕೆಲವೆಡೆ ತಾಂತ್ರಿಕ ಸಮಸ್ಯೆ ಎದುರಾಯಿತು.

ಮೈಸೂರಿನಲ್ಲಿ ಹೆಚ್ಚು:45ರಿಂದ 60 ವರ್ಷದೊಳಗಿನವರ ಪೈಕಿ ಮೈಸೂರಿನಲ್ಲಿ ಅತ್ಯಧಿಕ ಅಂದರೆ, 298 ಹಿರಿಯರು ಲಸಿಕೆ ಪಡೆದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 245 ಜನ ಲಸಿಕೆ ಹಾಕಿಸಿಕೊಂಡರು. ಬಳ್ಳಾರಿಯಲ್ಲಿ 215, ಉತ್ತರ ಕನ್ನಡದಲ್ಲಿ 138, ರಾಯಚೂರಿನಲ್ಲಿ 83 ಜನ ಲಸಿಕೆ ಪಡೆದರೆ, ಉಳಿದ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಲಸಿಕೆ ಹಾಕಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.