ADVERTISEMENT

ಬೆಂಗಳೂರು: ಭಕ್ತಿ ಭಾವದಿಂದ ವೈಕುಂಠ ಏಕಾದಶಿ ಆಚರಣೆ

ವಿವಿಧ ದೇವಸ್ಥಾನಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದ ಭಕ್ತರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 16:34 IST
Last Updated 23 ಡಿಸೆಂಬರ್ 2023, 16:34 IST
ಜೆ.ಪಿ. ನಗರದ 9ನೇ ಅಡ್ಡರಸ್ತೆಯಲ್ಲಿರುವ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. –ಪ್ರಜಾವಾಣಿ ಚಿತ್ರ
ಜೆ.ಪಿ. ನಗರದ 9ನೇ ಅಡ್ಡರಸ್ತೆಯಲ್ಲಿರುವ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ವಿವಿಧ ದೇವಸ್ಥಾನಗಳಲ್ಲಿ ಶನಿವಾರ ವೈಕುಂಠ ಏಕಾದಶಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಬೆಳಗಿನ ಜಾವದಿಂದಲೇ ಮಕ್ಕಳು, ಮಹಿಳೆಯರು, ಹಿರಿಯರು ದೇವಸ್ಥಾನಗಳಿಗೆ ತಂಡೋಪತಂಡವಾಗಿ ಬಂದು ವಿವಿಧ ಬಗೆಯ ಅಭಿಷೇಕಗಳನ್ನು ಮಾಡಿಸಿ, ದೇವರ ದರ್ಶನ ಪಡೆದರು. ಉಪವಾಸ ವ್ರತ ಆಚರಿಸಿದ ಮಹಿಳೆಯರು ಹಾಗೂ ಪುರುಷರ ದೇವಸ್ಥಾನಗಳಲ್ಲಿ ನೈವೇದ್ಯ ಸಲ್ಲಿಸಿದರು. ದೇವಾಲಯಗಳಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಸಹಸ್ರನಾಮ ಪಾರಾಯಣ, ನಾರಾಯಣ ಹವನಗಳನ್ನು ನಡೆಸಲಾಯಿತು.

ರಾಜಾಜಿನಗರ ಇಸ್ಕಾನ್ ದೇವಾಲಯದಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ಸಾವಿರಾರು ಭಕ್ತರು ವೈಕುಂಠ ದ್ವಾರ ದರ್ಶನ ಪಡೆದರು –ಪ್ರಜಾವಾಣಿ ಚಿತ್ರ

ರಾಜಾಜಿನಗರದಲ್ಲಿರವ ಇಸ್ಕಾನ್ ದೇವಾಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ವೈಕುಂಠ ದ್ವಾರ ದರ್ಶನ ಪಡೆದರು. ರಾಜಾಜಿನಗರ 5ನೇ ಹಂತದಲ್ಲಿ ಇರುವ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಶೇಷ ಶಯನರಾಗಿರುವ ದೇವರ ದರ್ಶನ ಪಡೆದು ಪುನೀತರಾದರು. 

ADVERTISEMENT

ವೈಯಾಲಿಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ, ಉಲ್ಲಾಳು ಮುನೇಶ್ವರ ನಗರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಜೆಪಿ ನಗರದ ವೆಂಕಟೇಶ್ವರ ದೇವಾಲಯ ಸೇರಿದಂತೆ ನಗರದ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರು ವೈಕುಂಠ ಏಕಾದಶಿಯ ಪ್ರಾರ್ಥನೆ ಸಲ್ಲಿಸಿದರು.

ನಗರದ ರಾಜಾಜಿನಗರ ಇಸ್ಕಾನ್ ದೇವಾಲಯದಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರು ದೇವರ ದರ್ಶನಕ್ಕಾಗಿ ಸಾಲು ನಿಂತಿರುವ ದೃಶ್ಯ –ಪ್ರಜಾವಾಣಿ ಚಿತ್ರ

ಕೆಂಗೇರಿಯ ಮರಿಯಪ್ಪನಪಾಳ್ಯದಲ್ಲಿರುವ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ವೈಕುಂಠ ಏಕಾದಶಿ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಪಾನೀಯ ನೀಡಿದರು.

ನಗರದ ರಾಜಾಜಿನಗರ 5ನೇ ಹಂತದಲ್ಲಿ ಇರುವ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಭಕ್ತರು ದೇವರ ದರ್ಶನ ಪಡೆದರು –ಪ್ರಜಾವಾಣಿ ಚಿತ್ರ

ಸುಪ್ರಭಾತ: ಜೆ.ಪಿ ನಗರದ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ  ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರು ಸುಶ್ರಾವ್ಯವಾಗಿ ಸುಪ್ರಭಾತ ಗೀತೆಗಳನ್ನು ಹಾಡಿ ಭಕ್ತರನ್ನು ಭಾವಪರವಶರಾಗುವಂತೆ ಮಾಡಿದರು.

ದೇವಾಲಯದ ಆವರಣದಲ್ಲಿ ಎ2 ಕ್ಲಾಸಿಕಲ್ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ ಪಿ. ಕೃಷ್ಣಪ್ರಸಾದ್ ಅವರ ಸಂಸ್ಥೆಯ ಮಾಲೀಕತ್ವದ ‘ವೆಂಕಟೇಶ್ವರ ಸುಬ್ರಹ್ಮಣ್ಯ” ಭಕ್ತಿ ಸಂಗೀತದ ಸಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ನಗರದ ವೈಯಾಲಿಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದ ಮುಂದೆ ಶನಿವಾರ ವೈಕುಂಠ ಏಕಾದಶಿ ಭಕ್ತಾದಿಗಳು ಸಾಲು ನಿಂತಿರುವ ದೃಶ್ಯ –ಪ್ರಜಾವಾಣಿ ಚಿತ್ರ

ದಾಬಸ್‌ಪೇಟೆಯ ಸೋಂಪುರ ಹೋಬಳಿಯ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ನಿಡವಂದದ ಲಕ್ಷ್ಮೀ ವೆಂಕಟೇಶ್ವರ, ಗೋವಿಂದಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ, ಇಮಚೇನಹಳ್ಳಿಯ ಸಿದ್ದೇಶ್ವರ-ವೆಂಕಟೇಶ್ವರ, ಕೆಂಗಲ್ ಗೊಲ್ಲರ ಹಟ್ಟಿಯ ಲಕ್ಷ್ಮೀ ವೆಂಕಟೇಶ್ವರ ಹಾಗೂ ನರಸೀಪುರ ತೋಪಿನ ಆತ್ಮಾರಾಮ ದೇವಾಲಯಗಳಲ್ಲಿ ದೇವರನ್ನು ಹೂ, ಹಣ್ಣು ಇತರ ವಸ್ತುಗಳಿಂದ, ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ರಾಜರಾಜೇಶ್ವರಿನಗರದ ನಾಗದೇವನಹಳ್ಳಿಯ ಮೂಡಲಗಿರಿ ತಿಮ್ಮಪ್ಪ ದೇವರಿಗೆ ವಿವಿಧ ಬಗೆಯ ಹೂವು ಹಣ್ಣು ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಯಿತು.

ಗೋವಿಂದಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಡೊಳ್ಳು ಕುಣಿತ, ಮಂಗಳ ವಾದ್ಯ, ಕಂಸಾಳೆ ವೃತ್ತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ನರಸೀಪುರ ತೋಪಿನ ಆತ್ಮಾರಾಮ ದೇವರಿಗೆ ವೆಂಕಟೇಶ್ವರ ಅಲಂಕಾರ ಮಾಡಲಾಯಿತು.

ಕೆ.ಆರ್‌. ಪುರದ ಎ.ನಾರಾಯಣಪುರದ ವೆಂಕಟೇಶ್ವರ ಸ್ವಾಮಿಯ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ವೈಕುಂಠ ಏಕಾದಶಿ ಪ್ರಯುಕ್ತ ವಸತಿ ಸಚಿವ ಜಮೀರ್ ಅಹಮದ್ ಖಾನ್‌ ಬೆಂಗಳೂರಿನ ಕೋಟೆ ವೆಂಕಟರಾಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.