ADVERTISEMENT

ಒಲವಿನ ಉಡುಗೊರೆ: ಕೆಂಗುಲಾಬಿಗೆ ಬಲು ಬೇಡಿಕೆ

ಪಾಲಿಹೌಸ್‌ನಲ್ಲಿ ಬೆಳೆದ ಹೂವಿನ ದರ ದುಪ್ಪಟ್ಟು

ಮನೋಹರ್ ಎಂ.
Published 13 ಫೆಬ್ರುವರಿ 2020, 9:43 IST
Last Updated 13 ಫೆಬ್ರುವರಿ 2020, 9:43 IST
ಕೆಂಗುಲಾಬಿ
ಕೆಂಗುಲಾಬಿ   

ಬೆಂಗಳೂರು: ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, ಒಲವಿನ ಬಾಂಧವ್ಯ ಬೆಸೆಯುವ ಕೆಂಗುಲಾಬಿಗೆ ಬೇಡಿಕೆ ಹೆಚ್ಚಾಗಿದೆ.

ಫೆ.14ರಂದು ಪ್ರೇಮಿಗಳನ್ನು ಸೆಳೆಯಲು ಐಷಾರಾಮಿ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಗುಲಾಬಿಗಳಿಂದ ಸಿಂಗಾರಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಒಂದು ವಾರದಿಂದ ಗುಲಾಬಿ ಹೂಗಳಿಗೆ ದೇಶ, ವಿದೇಶಗಳಿಂದ ಬೇಡಿಕೆ ಹೆಚ್ಚಾಗಿದೆ.

ಹೆಬ್ಬಾಳದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವು (ಐಎಫ್‌ಎಬಿ) ದೇಶದಲ್ಲಿ ಗುಲಾಬಿ ಪೂರೈಸುವ ಏಕೈಕ ಸಂಸ್ಥೆ. ಒಂದು ವಾರದಿಂದ ಇಲ್ಲಿಂದ ಲಕ್ಷಗಟ್ಟಲೆ ಗುಲಾಬಿಗಳು ಹೊರ ರಾಜ್ಯಗಳಿಗೆ, ವಿದೇಶಗಳಿಗೆ ನಿತ್ಯ ರವಾನೆಯಾಗುತ್ತಿವೆ.

ADVERTISEMENT

‘ಕೆಂಪು ಗುಲಾಬಿಗೆ ಒಂದು ವಾರದಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈತರಿಂದ ಕೆಂಪು ಗುಲಾಬಿಯನ್ನು ಹೆಚ್ಚು ತರಿಸಿಕೊಳ್ಳುತ್ತಿದ್ದೇವೆ.ಫೆ.13ರ ವೇಳೆಗೆ ಗುಲಾಬಿ ಬೇಡಿಕೆ 10 ಲಕ್ಷಕ್ಕೆ ಹೆಚ್ಚುವ ನಿರೀಕ್ಷೆ ಇದೆ’ ಎಂದುಐಎಫ್‌ಎಬಿ ವ್ಯಾಪಾರ ಅಭಿವೃದ್ಧಿ ಅಧಿಕಾರಿ ಎ.ಎಸ್.ಮಿಥುನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರಿಗೆ ಒಂದು ಹೂವಿಗೆ ₹ 2 ಉತ್ಪಾದನಾ ವೆಚ್ಚ ತಗಲುತ್ತದೆ.ಸಾಮಾನ್ಯ ದಿನಗಳಲ್ಲಿ ಪ್ರತಿ ಗುಲಾಬಿ ₹5ರಂತೆ ಹರಾಜಾಗುತ್ತದೆ. ಆಷಾಢ ಹಾಗೂ ಪಿತೃ ಪಕ್ಷವಿದ್ದಾಗ ಹೂವಿಗೆ ಬೇಡಿಕೆ ಕಡಿಮೆ. ಆಗ ಬೆಳೆಗಾರರು ನಷ್ಟ ಅನುಭವಿಸುತ್ತಾರೆ. ನವೆಂಬರ್‌ನಿಂದ ಫೆಬ್ರುವರಿ ಅವಧಿಯಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ನಾಲ್ಕು ತಿಂಗಳಲ್ಲಿ ರೈತರಿಗೆ ಈ ಬೆಳೆ ಲಾಭ ತರುತ್ತದೆ’ ಎಂದರು.

‘ನವೆಂಬರ್‌ನಿಂದಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ. ಜೊತೆಗೆ ಫೆಬ್ರುವರಿಯಲ್ಲಿ ಪ್ರೇಮಿಗಳ ದಿನ ಇರುವುದರಿಂದ ಗುಲಾಬಿ ವ್ಯಾಪಾರ ಗರಿಗೆದರುತ್ತದೆ. ಸದ್ಯ ಒಂದು ಗುಲಾಬಿ ₹20ರ ವರೆಗೆ ಇದೆ’ ಎಂದರು.

ತಾಜ್‌ಮಹಲ್‌ ಗುಲಾಬಿಗೆ ಹೆಚ್ಚು ಬೇಡಿಕೆ: ‘ಕೇಸರಿ, ಬಿಳಿ, ಹಳದಿ, ನಸುಗೆಂಪು ಸೇರಿ ವಿವಿಧ ಬಣ್ಣಗಳ ಗುಲಾಬಿ ನಮ್ಮಲ್ಲಿ ಲಭ್ಯವಿದ್ದರೂ ಫೆಬ್ರುವರಿಯಲ್ಲಿ ಕೆಂಪು ಬಣ್ಣದ ಗುಲಾಬಿಗೆ ಬೇಡಿಕೆ ಹೆಚ್ಚು. ಕೆಂಗುಲಾಬಿಯಲ್ಲಿ ಆರಕ್ಕೂ ಹೆಚ್ಚು ಬಗೆಗಳಿವೆ. ಅವುಗಳಲ್ಲಿ ‘ತಾಜ್‌ಮಹಲ್‌’ ಕೆಂಗುಲಾಬಿ ದುಬಾರಿ. ವಿಶೇಷವಾಗಿ ಅಲಂಕಾರಗಳಿಗೆ ಇದನ್ನು ಬಳಸುತ್ತಾರೆ. ಪ್ರೇಮಿಗಳ ದಿನಕ್ಕಾಗಿ ಈ ಹೂವನ್ನು ಹೆಚ್ಚು ಖರೀದಿಸುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

‘ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಚಾಮರಾಜನಗರ, ಕೊಡಗು, ಹೊಸೂರು, ಅನಂತಪುರಗಳಲ್ಲಿ ಗುಲಾಬಿ ಬೆಳೆಯುವ 250 ಬೆಳೆಗಾರರು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪಾಲಿಹೌಸ್‌ಗಳಲ್ಲಿ ಬೆಳೆದ ಗುಲಾಬಿಗಳನ್ನು ಇಲ್ಲಿಗೆ ಕಳುಹಿಸುತ್ತಾರೆ. ಹೊರ ರಾಜ್ಯಗಳ 190ಕ್ಕೂ ಹೆಚ್ಚು ಗ್ರಾಹಕರು ಇಲ್ಲಿಂದ ಗುಲಾಬಿ ಖರೀದಿಸುತ್ತಾರೆ. ದೆಹಲಿ, ಕೋಲ್ಕತ್ತ ಹಾಗೂ ಹೈದರಾಬಾದ್‌ ನಗರಗಳಿಗೆ ಹೆಚ್ಚು ರವಾನೆಯಾಗುತ್ತದೆ’ ಎಂದು ವಿವರಿಸಿದರು.

ಬೇಡಿಕೆ ಇರುವ ಕೆಂಗುಲಾಬಿಗಳು

* ತಾಜ್‌ಮಹಲ್

* ಹಾಟ್‌ಶಾಟ್

* ಕಾರ್ವೆಟ್‌

* ರಾಕ್‌ಸ್ಟಾರ್

* ಬ್ರಿಲಿಯಂಟ್

* ಫರ್ಸ್ಟ್‌ ರೆಡ್‌

* ಗ್ರ್ಯಾಂಡ್‌ಗಲಾ

ಅಂಕಿ ಅಂಶ

* ₹24 -ಕೆಂಗುಲಾಬಿಯೊಂದರ ಗರಿಷ್ಠ ದರ (ಮಂಗಳವಾರ)

* 48 -ಮಾರಾಟವಾಗುತ್ತಿರುವ ಗುಲಾಬಿ ವಿಧಗಳು

* 5 ಲಕ್ಷ -ನಿತ್ಯ ರವಾನೆಯಾಗುವ ಗುಲಾಬಿ ಪ್ರಮಾಣ

* ₹40 ಲಕ್ಷ -ಐಎಫ್‌ಎಬಿ ದೈನಂದಿನಸರಾಸರಿ ವಹಿವಾಟು

***

ಕಳೆದ ಬಾರಿಗಿಂತ ಈ ವರ್ಷ ಗುಲಾಬಿ ದರ ಶೇ 15ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಒಂದು ಹೂವಿಗೆ ಗರಿಷ್ಠ ₹ 26 ದರವಿತ್ತು. ಈ ಬಾರಿ ₹ 30ರಿಂದ ₹35ಕ್ಕೆ ಹೆಚ್ಚುವ ನಿರೀಕ್ಷೆ ಇದೆ.
–ಎ.ಎಸ್.ಮಿಥುನ್, ಐಎಫ್‌ಎಬಿ ವ್ಯಾಪಾರ ಅಭಿವೃದ್ಧಿ ಅಧಿಕಾರಿ

ಕೆಲವು ಬಾರಿ ಗುಲಾಬಿ ದರ ಕಡಿಮೆಯಾಗಿ ನಷ್ಟ ಅನುಭವಿಸಿದ್ದೂ ಉಂಟು. ಆದರೆ, ಈಗ ಹೂಗಳಿಗೆ ಬೇಡಿಕೆ ಹೆಚ್ಚಾಗಿರುವುದರ ಜೊತೆಗೆ ದರವೂ ಏರಿಕೆಯಾಗಿರುವುದು ಸಂತಸ ತಂದಿದೆ.
–ಅಲೋಕ್ ದಾಸ್‌, ಕೋಲ್ಕತ್ತ ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.