ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ‘ಫಸ್ಟ್ ಫೈನಾನ್ಸ್’ ಖಾತೆಗಳಿಗೆ ₹ 94.73 ಕೋಟಿ

ಸಂತೋಷ ಜಿಗಳಿಕೊಪ್ಪ
Published 4 ಜೂನ್ 2024, 23:47 IST
Last Updated 4 ಜೂನ್ 2024, 23:47 IST
ಸತ್ಯನಾರಾಯಣ್
ಸತ್ಯನಾರಾಯಣ್   

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ (ಎಫ್‌ಎಫ್‌ಸಿಸಿಎಸ್‌ಎಲ್‌) 18 ಖಾತೆಗಳಿಗೆ ₹ 94.73 ಕೋಟಿ ಜಮೆ ಆಗಿರುವ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ.

ಹಣ ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ಪುರಾವೆಗಳನ್ನು ಸಂಗ್ರಹಿಸಿರುವ ಎಸ್ಐಟಿ ಅಧಿಕಾರಿಗಳು, ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ.

‘ಹೈದರಾಬಾದ್‌ನ ಸತ್ಯನಾರಾಯಣ್, ಹಣ ಅಕ್ರಮ ವರ್ಗಾವಣೆ ಕೃತ್ಯದಲ್ಲಿ ಭಾಗಿಯಾಗಿದ್ದ ಬಗ್ಗೆ ಹಲವು ಪುರಾವೆಗಳು ಲಭ್ಯವಾಗಿವೆ. ಇವುಗಳನ್ನು ಆಧರಿಸಿ ಸತ್ಯನಾರಾಯಣನನ್ನು ಹೈದರಾಬಾದ್‌ನಲ್ಲಿ ಸೆರೆ ಹಿಡಿದು ನಗರಕ್ಕೆ ಕರೆತರಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸೊಸೈಟಿಯ 18 ಖಾತೆಗಳಿಗೆ ಹಣ: ‘ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್, ಹಣ ಅಕ್ರಮ ವರ್ಗಾವಣೆ ಸಂಬಂಧ ಕೆಲ ದಾಖಲೆಗಳನ್ನು ಒದಗಿಸಿದ್ದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆ ಶಾಖೆಯಿಂದ ಕೆಲ ದಾಖಲೆಗಳನ್ನೂ ಸಂಗ್ರಹಿಸಲಾಗಿತ್ತು. ಇವುಗಳನ್ನು ಪರಿಶೀಲಿಸಿದಾಗ, 18 ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಮಾಹಿತಿ ಲಭ್ಯವಾಗಿತ್ತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿರುವ (ಎಫ್‌ಎಫ್‌ಸಿಸಿಎಸ್‌ಎಲ್‌) ಒಂದು ಖಾತೆಗೆ ಆರಂಭದಲ್ಲಿ ನೇರವಾಗಿ ₹ 5 ಕೋಟಿ ಜಮೆ ಆಗಿತ್ತು. ಇದಾದ ನಂತರ, ಬೇರೆ ಬ್ಯಾಂಕ್ ಖಾತೆಗಳ ಮೂಲಕ ಸೊಸೈಟಿಯ 17 ಖಾತೆಗಳಿಗೆ ₹ 89.73 ಕೋಟಿ ಜಮೆ ಆಗಿರುವುದಕ್ಕೆ ಪುರಾವೆಗಳು ಸಿಕ್ಕಿದ್ದವು. ಇವುಗಳನ್ನು ಆಧರಿಸಿ ಹೈದರಾಬಾದ್‌ಗೆ ಹೋಗಿದ್ದ ಎಸ್‌ಐಟಿ ತಂಡ, ಸೊಸೈಟಿ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ನಂತರವೇ, ಅಧ್ಯಕ್ಷ ಸತ್ಯನಾರಾಯಣನನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಭಾವಿಗಳ ಜೊತೆ ಒಡನಾಟ: ‘ಆರೋಪಿ ಸತ್ಯನಾರಾಯಣ ಹಾಗೂ ಇತರರು ಸೇರಿಕೊಂಡು 2013ರಲ್ಲಿ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು. ಆರಂಭದಲ್ಲಿ 10 ಗ್ರಾಹಕರು ಮಾತ್ರ ಇದ್ದರು. ಇದೀಗ 7,000 ಗ್ರಾಹಕರಿದ್ದು, 13 ಶಾಖೆಗಳಿವೆ. ಹೈದರಾಬಾದ್‌ನ ನಲ್ಲಕುಂಟದಲ್ಲಿ ಸೊಸೈಟಿಯ ಪ್ರಧಾನ ಕಚೇರಿ ಇದೆ. ವರ್ಷದಿಂದ ವರ್ಷಕ್ಕೆ ಸೊಸೈಟಿ ವಹಿವಾಟು ಹೆಚ್ಚಳ ಆಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದ ಕೆಲ ರಾಜಕಾರಣಿಗಳು, ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಜೊತೆ ಸತ್ಯನಾರಾಯಣ್ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ. ಹೀಗಾಗಿಯೇ, ರಾಜ್ಯದ ಹಲವು ಖಾತೆಗಳಿಂದ ಆಗಾಗ ಸೊಸೈಟಿಯ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿದೆ. ಇದೀಗ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವೂ ಇದೇ ಸೊಸೈಟಿ ಖಾತೆಗಳಿಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಈಗಾಗಲೇ ಪ್ರಕರಣದಲ್ಲಿ ಬಂಧಿಸಲಾಗಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ (55) ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಸಹಿಯುಳ್ಳ ಚೆಕ್‌ಗಳ ಮೂಲಕವೇ ಸೊಸೈಟಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಆದರೆ, ತಮ್ಮ ಸಹಿ ಹಾಗೂ ಮೊಹರು ನಕಲು ಮಾಡಿರುವುದಾಗಿ ಇಬ್ಬರೂ ಆರೋಪಿಗಳು ಹೇಳುತ್ತಿದ್ದಾರೆ. ಅಸಲಿ ಹಾಗೂ ನಕಲಿ ಸಹಿ–ಮೊಹರುಗಳನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿವೆ.

ಖಾತೆಗಳಿಂದ ಹಣ ಡ್ರಾ: ‘ಸೊಸೈಟಿ ಖಾತೆಯಲ್ಲಿದ್ದ ಹಣವನ್ನು, ಖಾತೆದಾರರು ಡ್ರಾ ಮಾಡಿಕೊಂಡಿದ್ದಾರೆ. ಒಬ್ಬ ಖಾತೆದಾರರು ಮಾತ್ರ, ಹಣವನ್ನು ವಾಪಸ್ ಖಾತೆಗೆ ಪಾವತಿಸಿದ್ದಾರೆ. ಉಳಿದವರ ಖಾತೆಗಳಲ್ಲಿ ಸ್ವಲ್ಪ ಹಣ ಮಾತ್ರ ಇದೆ. ನಿಗಮದ ಹಣ ಎಲ್ಲಿದೆ ? ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. ಖಾತೆದಾರರ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಆದಷ್ಟು ಬೇಗ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

2013ರಲ್ಲಿ ಸ್ಥಾಪನೆಯಾಗಿದ್ದ ಸೊಸೈಟಿ 13 ಶಾಖೆಯಲ್ಲಿ 7 ಸಾವಿರ ಗ್ರಾಹಕರು ಕೆಲ ಮುಖಂಡರ ಜೊತೆ ಅಧ್ಯಕ್ಷನ ಒಡನಾಟ
ಸಚಿವರ ಆಪ್ತ ನಾಗರಾಜು ವಿಚಾರಣೆ ?
ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ಆಪ್ತ ಎನ್ನಲಾದ ಕಾಂಗ್ರೆಸ್ ಮುಖಂಡ ನೆಕ್ಕಂಟಿ ನಾಗರಾಜ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವುದಾಗಿ ಗೊತ್ತಾಗಿದೆ. ಆದರೆ ಈ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಖಚಿತಪಡಿಸಿಲ್ಲ. ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಾಗರಾಜ್ ಭಾಗಿಯಾಗಿರುವ ಆರೋಪವಿದೆ. ಸೂಕ್ತ ಪುರಾವೆಗಳನ್ನು ಆಧರಿಸಿ ಅವರ ವಿಚಾರಣೆ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದರು.
‘ಬಂಧನ ಭೀತಿ: ನಿರೀಕ್ಷಣಾ ಜಾಮೀನಿಗೆ ಅರ್ಜಿ’
‘ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳಾಗಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಮಣಿಮೇಖಲೈ ನಿತೇಶ್ ರಂಜನ್ ರಾಮಸುಬ್ರಹ್ಮಣ್ಯಂ ಸಂಜಯ್‌ ರುದ್ರ ಪಂಕಜ್ ದ್ವಿವೇದಿ ಹಾಗೂ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ರಾವಲ್ ಅವರಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಗೈರಾಗಿರುವ ಹಲವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. ‘ಬ್ಯಾಂಕ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿಯೇ ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ. ಹೀಗಾಗಿ ಆರೋಪಿಗಳು ಬಂಧನ ಭೀತಿಯಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.