ಸಿಬಿಐ ಕಚೇರಿ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.
‘ನಿಗಮದ ಖಾತೆಯಲ್ಲಿದ್ದ ಹಣ ಹಲವು ಖಾಸಗಿ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಆಗಿದೆ’ ಎಂದು ಆರೋಪಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಪೂರ್ವ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮಹೇಶ್ ಜೆ. ಅವರು ಸಿಬಿಐಗೆ ಇತ್ತೀಚೆಗೆ ದೂರು ನೀಡಿದ್ದರು.
ದೂರು ಪರಿಶೀಲನೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಯೂನಿಯನ್ ಬ್ಯಾಂಕ್ ಇಂಡಿಯಾದ ಎಂ.ಜಿ.ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ರಾವಲ್, ಉಪ ವ್ಯವಸ್ಥಾಪಕಿ ಡಿ. ದೀಪಾ, ಅಧಿಕಾರಿ ವಿ. ಕೃಷ್ಣಮೂರ್ತಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
‘2024ರ ಫೆಬ್ರುವರಿ 21ರಿಂದ ಮೇ 6ರವರೆಗೆ ಹಂತ ಹಂತವಾಗಿ ₹ 89.63 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕೇವಲ ₹ 5 ಕೋಟಿ ವಾಪಸು ಪಡೆಯಲಾಗಿದೆ. ಉಳಿದಂತೆ ₹ 84.63 ಕೋಟಿ ವಾಪಸು ಬರಬೇಕಿದೆ’ ಎಂದು ಡಿಜಿಎಂ ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಲವು ಕಂಪನಿ ಖಾತೆಗಳ ವಿವರ ಹಾಗೂ ಹಣ ವರ್ಗಾವಣೆ ದಾಖಲೆಗಳನ್ನು ದೂರಿನ ಜೊತೆ ಲಗತ್ತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.