ADVERTISEMENT

ವಂದೇ ಭಾರತ್ ಎಕ್ಸ್‌ಪ್ರೆಸ್‌: ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:14 IST
Last Updated 10 ನವೆಂಬರ್ 2022, 20:14 IST
ವಂದೇ ಭಾರತ್ ಎಕ್ಸ್‌ಪ್ರೆಸ್‌
ವಂದೇ ಭಾರತ್ ಎಕ್ಸ್‌ಪ್ರೆಸ್‌   

ಬೆಂಗಳೂರು: ಮಹತ್ವಾಕಾಂಕ್ಷೆಯ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ. ನ.12ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ವೇಳಾಪಟ್ಟಿ ಪ್ರಕಟಗೊಂಡಿದೆ.

ಚೆನ್ನೈ-ಬೆಂಗಳೂರು-ಮೈಸೂರು (20607/ 20608) ನಿತ್ಯ ಬೆಳಿಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು, 7.21ಕ್ಕೆ ಕಟ್ಪಾಡಿ, 10.15ಕ್ಕೆ ಕೆಎಸ್‌ಆರ್ ನಿಲ್ದಾಣ, ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ.

ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಡುವ ರೈಲು, 2.50ಕ್ಕೆ ಕೆಎಸ್‌ಆರ್‌, ಸಂಜೆ 7.30ಕ್ಕೆ ಚೆನ್ನೈ ತಲುಪಲಿದೆ. 6 ಗಂಟೆ 30 ನಿಮಿಷದಲ್ಲಿ 497 ಕಿಲೋ ಮೀಟರ್ ಕ್ರಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ADVERTISEMENT

ಪ್ರಯಾಣ ದರ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ಮತ್ತು ಶತಾಬ್ದಿ ಎಕ್ಸ್‌‍ಪ್ರೆಸ್ ರೈಲುಗಳ ಪ್ರಯಾಣ ದರದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಇದೆ. ಚನ್ನೈ–ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ₹1200(ಚೇರ್ ಕಾರ್‌) ಮತ್ತು ₹2,295(ಎಕ್ಸಿಕ್ಯುಟಿವ್ ಕಾರ್‌) ಇದೆ. ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಕ್ರಮವಾಗಿ ₹1135 ಮತ್ತು ₹2280 ಇದೆ.

ಕಾಶಿ ದರ್ಶನ ವೇಳಾಪಟ್ಟಿ
14 ಬೋಗಿಗಳ ‘ಕಾಶಿ ದರ್ಶನ’ ರೈಲು ಬೆಂಗಳೂರು ಕೆಎಸ್‌ಆರ್-ಬನಾರಸ್ ನಡುವೆ ಸಂಚರಿಸಲಿದ್ದು, ಈ ರೈಲಿನ ವೇಳಾಪಟ್ಟಿಯೂ ಗುರುವಾರ ಪ್ರಕಟಗೊಂಡಿದೆ.

ಭಾರತ ಗೌರವ ದರ್ಶನ ರೈಲು (ರೈಲು ಸಂಖ್ಯೆೆ 06553) ಶುಕ್ರವಾರ ಬೆಳಿಗ್ಗೆ 10.33ಕ್ಕೆ ಕೆಎಸ್‌ಆರ್‌ನಿಂದ ಹೊರಡಲಿದ್ದು, ನ. 13ರಂದು ಸಂಜೆ 4ಕ್ಕೆ ಬನಾರಸ ತಲುಪಲಿದೆ. ಬೀರೂರು, ದಾವಣಗೆರೆ, ಹುಬ್ಬಳ್ಳಿ, ಪುಣೆ, ಮೀರಜ ಮೂಲಕ ಇದು ಹಾದುಹೋಗಲಿದೆ.

ಅದೇ ರೀತಿ, ಬನಾರಸ್- ಕೆಎಸ್‌ಆರ್ (06554) ನ. 15ರಂದು ಬೆಳಿಗ್ಗೆ 5.30ಕ್ಕೆ ಬನಾರಸ್‌ನಿಂದ ಹೊರಡಲಿದ್ದು, 18ರಂದು ಸಂಜೆ 6.40ಕ್ಕೆ ಬೆಂಗಳೂರು ತಲುಪಲಿದೆ. ಅಯೋಧ್ಯೆ ಮತ್ತು ಪ್ರಯಾಗರಾಜ್‌ನಲ್ಲಿ ರೈಲು ನಿಲುಗಡೆ ಆಗಲಿದೆ. ರಾಜ್ಯ ಸರ್ಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ನೀಡಿ ₹5 ಸಾವಿರ ದರ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.